ಕೋಟ, ಮೇ 15: ಮಕ್ಳಳ ಮನಸ್ಸುಗಳು ಮುಗ್ಧತೆಯಿಂದ ಕೂಡಿದ್ದು ಅವರ ಬಾಲ್ಯದಲ್ಲಿ ಸರಿಯಾದ ಮಾರ್ಗದರ್ಶನ ನೀಡಿದರೆ ಮುಂದಿನ ಉಜ್ವಲ ಭವಿಷ್ಯಕ್ಕೆ ನಾಂದಿಯಾಗಲಿದೆ ಈ ನಿಟ್ಟಿನಲ್ಲಿ ಶಿಬಿರಗಳು ಮಕ್ಕಳ ಅರ್ಥಪೂರ್ಣ ಬಾಲ್ಯ ಕಟ್ಟಿಕೊಡಲು ಸಹಕಾರಿ, ಯಕ್ಷಗಾನ ಶಿಬಿರದಿಂದ ಮಕ್ಕಳಿಗೆ ಯಕ್ಷಗಾನದ ಅರಿವು ಸಾಧ್ಯ. ಇಂತಹ ಕಾರ್ಯಕ್ರಮ ಆಯೋಜನೆ ಶ್ಲಾಘನೀಯ ಎಂದು ಶ್ರೀ ಗುರುನರಸಿಂಹ ದೇವಸ್ಥಾನ ಸಾಲಿಗ್ರಾಮದ ಮಾಜಿ ಅಧ್ಯಕ್ಷ ಅನಂತಪದ್ಮನಾಭ ಐತಾಳ್ ಅವರು ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುತ್ತಿರುವ ರಂಗುರಂಗಿನ ಯಕ್ಷಗಾನ ಬೇಸಿಗೆ ಶಿಬಿರ ಬಾಲವನ (ಬಣ್ಣದ ಓಕುಳಿ) ಕಾರ್ಯಕ್ರಮದ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡುತ್ತಿದ್ದರು. ಶ್ರೀ ಕ್ಷೇತ್ರ ಕೊಲ್ಲೂರು ದೇವಸ್ಥಾನದ ಟ್ರಸ್ಟಿ ಕೆ.ಪಿ ಶೇಖರ್ ಮಾತನಾಡಿ, ಭಾಷೆಯ ಹಿಡಿತಕ್ಕೆ ಯಕ್ಷಗಾನ ಕೈಗನ್ನಡಿಯಾಗಿದ್ದು, ಮಕ್ಕಳಲ್ಲಿ ಯಕ್ಷಗಾನದ ಅಭಿರುಚಿಯ ಮೂಲಕ ಭಾಷೆಯ ಬೆಳವಣಿಗೆ ಸಾಧ್ಯ ಎಂದರು.
ಯಕ್ಷಗಾನ ಶಿಬಿರದ ಗುರುಗಳಾದ ಸೀತಾರಾಮ ಶೆಟ್ಟಿ, ಸಂಗೀತಾ ಕಾರ್ತಟ್ಟು, ಗಣೇಶ್ ಕಾರ್ಕಡ, ಸ್ವಸ್ತಿಕ್ ವಡ್ಡರ್ಸೆ ಅವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಉಡುಪಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಲಯನ್ ಬನ್ನಾಡಿ ಸೋಮನಾಥ ಹೆಗ್ಡೆ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು.