ಉಡುಪಿ: ರೆಡ್ ಕ್ರಾಸ್ ಸಂಸ್ಥೆಯು ಅಂತರಾಷ್ಟ್ರೀಯ ಸೇವಾ ಸಂಸ್ಥೆಯಾಗಿದ್ದು, ಮಾನವೀಯ ನೆಲೆಯಲ್ಲಿ ಸೇವೆ ಮಾಡುತ್ತಿದ್ದು, ಕೋವಿಡ್ ಸಂದರ್ಭದಲ್ಲಿ ಜಿಲ್ಲೆಯಾದ್ಯಂತ ಮಾಸ್ಕ್, ಸೋಪು, ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿರುತ್ತದೆ ಎಂದು ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಹೇಳಿದರು.
ಅವರು ನಗರದ ರೆಡ್ ಕ್ರಾಸ್ ಭವನದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಉಡುಪಿ ಜಿಲ್ಲಾ ಘಟಕ ಮತ್ತು ಜಿಲ್ಲಾ ವಿಕಲ ಚೇತನರ ಪುನರ್ವಸತಿ ಕೇಂದ್ರದ ಸಹಯೋಗದೊಂದಿಗೆ ಕೋವಿಡ್‌ನಿಂದ ನೊಂದ ಬಡ ಫಲಾನುಭವಿಗಳಿಗೆ ರಾಜ್ಯ ಶಾಖೆಯಿಂದ ನೀಡಲ್ಪಟ್ಟ ದಿನಸಿ ಸಾಮಾಗ್ರಿಗಳ ಕಿಟ್ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ರೆಡ್ ಕ್ರಾಸ್‌ನ ಅಂಗಸಂಸ್ಥೆಯಾದ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದಲ್ಲಿ ವಿಕಲಚೇತನ ಫಲಾನುಭವಿಗಳಿಗೆ ಸಿಗುವ ಸೌಲಭ್ಯ ಹಾಗೂ ಕೃತಕ ಕಾಲು ನೀಡುವಿಕೆ, ತಜ್ಞರಾದ ಆಡಿಯೋಲಿಜಿಸ್ಟ್, ಸೈಕ್ಯಾಟ್ರಿಕ್ ಫಿಸಿಯೋಥೆರಪಿಸ್ಟ್ರವರ ಸೇವೆಯನ್ನು ಸಾರ್ವಜನಿಕರು ಬಳಸುವಂತೆ ತಿಳಿಸಿದ ಅವರು, ಮುಂದಿನ ದಿನಗಳಲ್ಲಿ ಕೋವಿಡ್‌ನಿಂದ ಮೃತಪಟ್ಟ ಮನೆಯ ಸದಸ್ಯರು ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಿದ್ದಲ್ಲಿ ಹೊಲಿಗೆ ಮೆಶಿನ್ ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ಯುನಿಟ್ ಇನ್ ಚಾರ್ಜ್ ಜಯಶ್ರೀ, ರೆಡ್ ಕ್ರಾಸ್ ಮತ್ತು ಡಿಡಿಆರ್‌ಸಿ ಸಿಬ್ಬಂದಿಗಳು ಉಪಸ್ಥಿತರಿದ್ದರು.
ರೆಡ್‌ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಗೌರವ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯೆ ರಮಾದೇವಿ ವಂದಿಸಿದರು.