ಕೋಟ: ಕಾರಂತರ ಬದುಕೇ ಒಂದು ಪಾಠಶಾಲೆ. ಜೀವನದ ಉದ್ದಕ್ಕು ನುಡಿದಂತೆ ಬದುಕಿ ತೋರಿಸಿದವರು, ಅವರ ಪರಿಸರದ ಮೇಲೆ ಕಾಳಜಿ ಅಪಾರವಾದದ್ದು, ಒಬ್ಬ ವ್ಯಕ್ತಿ ತನ್ನ ಬದುಕಿನಲ್ಲಿ ಏನೆಲ್ಲ ಸಾಧಿಸಬಹುದೆಂದು ಕಾರಂತರೇ
ಉದಾಹರಣೆ.
ಕಾರಂತರ ನೆನಪಿನಲ್ಲಿ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆ ಮೂಲಕ ಥೀಮ್ ಪಾರ್ಕ್ ಉತ್ತಮ ಕಾರ್ಯನಿರ್ವಹಿಸುತ್ತಿದೆ. ಕಾರಂತರ ನೆನಪುಗಳ ಅನಾವರಣಕ್ಕೆ ಥೀಮ್ ಪಾರ್ಕ್ ಸಹಕಾರಿ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.
ಅವರು ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಕೆರೆಯ ಮಧ್ಯದಲ್ಲಿರುವ ಕಾರಂತರ ಕಂಚಿನ ಪುತ್ಥಳಿಗೆ ಮಾಲಾರ್ಪಣೆ ಮಾಡಿ ರಂಗ ಮಂದಿರ, ಗ್ರಂಥಾಲಯ, ಆರ್ಟ್ ಗ್ಯಾಲರಿ, ಅಂಗನವಾಡಿ ವೀಕ್ಷಿಸಿ ಮಾತನಾಡುತ್ತಿದ್ದರು.
ಥೀಮ್ ಪಾರ್ಕ್ ವತಿಯಿಂದ ಅವರನ್ನು ಗೌರವಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಸಹಾಯಕ ಆಯುಕ್ತ ರಾಜು ಕೆ., ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಬ್ರಹ್ಮಾವರ ತಹಶೀಲ್ದಾರ್ ರಾಜಶೇಖರ್ ಮೂರ್ತಿ, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ , ಪ್ರತಿಷ್ಠಾನ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.