ಉಡುಪಿ: ಉಡುಪಿ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲು ಕಾಶೀ ಮಠಾಧೀಶರಾದ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ಕೊಡಮಾಡಿದ ಪಚ್ಚೆ ಕಲ್ಲಿನ ಸ್ವರ್ಣ ಹಾರವನ್ನು ಗೌಡ ಸಾರಸ್ವತ ಸಮಾಜದ ದೇವಸ್ಥಾನಗಳ ಪ್ರಮುಖರು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರಿಗೆ ಹಸ್ತಾಂತರಿಸಿದರು.

ಪ್ರಪಂಚದ ಎಲ್ಲಾ ವಸ್ತುಗಳೂ ಭಗವಂತನ ಕೊಡುಗೆಗಳಾಗಿವೆ ಎಂಬ ಅನುಸಂಧಾನದ ಮೂಲಕ ದೇವರಿಗೆ ವಸ್ತುಗಳ ಸಮರ್ಪಣೆಯಾಗಬೇಕು. ಶ್ರೀಕೃಷ್ಣನ ವಿಗ್ರಹದಲ್ಲಿ ದೇವರನ್ನು ನೋಡಿ ಈ ಹಾರವನ್ನು ಶ್ರೀ ಸಂಯಮೀಂದ್ರತೀರ್ಥರು ಸಮರ್ಪಿಸುತ್ತಿದ್ದಾರೆ ಎಂದು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರತೀರ್ಥರು ಇತ್ತೀಚಿಗೆ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ದ್ಯೋತಕವಾಗಿ ಈ ಹಾರವನ್ನು ಶ್ರೀ ಕೃಷ್ಣ ದೇವರಿಗೆ ಸಮರ್ಪಿಸಲು ಕೊಟ್ಟಿದ್ದಾರೆಂದು ಜಿಎಸ್‌ಬಿ ದೇವಸ್ಥಾನಗಳ ಒಕ್ಕೂಟದ ಉಪಾಧ್ಯಕ್ಷ ದಿನೇಶ್ ಕಾಮತ್ ತಿಳಿಸಿದರು.


ಶಾಸಕ ಕೆ. ರಘುಪತಿ ಭಟ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ, ಕೋಟೇಶ್ವರ ಪಟ್ಟಾಭಿರಾಮಚಂದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಶ್ರೀಧರ ಕಾಮತ್, ಮಂಜೇಶ್ವರ ಅನಂತೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಿನೇಶ್ ಕಾಮತ್, ಮಂಗಳೂರಿನ ನರೇಶ ಶೆಣೈ, ಮೂಲ್ಕಿ ವೆಂಕಟರಮಣ ದೇವಸ್ಥಾನದ ಮೊಕ್ತೇಸರ ಅತುಲ್ ಕುಡ್ವ, ಸೋಮೇಶ್ವರ ವೆಂಕಟರಮಣ ದೇವಸ್ಥಾನದ ಮೊಕ್ತೇಸರರಾದ ರಾಘವೇಂದ್ರ ಭಕ್ತ, ಮಾಧವ ಕಾಮತ್, ಉಡುಪಿ ವೆಂಕಟರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪಿ.ವಿಟ್ಠಲದಾಸ ಶೆಣೈ, ಮೊಕ್ತೇಸರ ಎಂ. ವಿಶ್ವನಾಥ ಭಟ್ ಮೊದಲಾದವರು ಉಪಸ್ಥಿತರಿದ್ದರು.

