ಉಡುಪಿ: ಉಡುಪಿ ಜಿಲ್ಲೆಯಲ್ಲಿನ ಕೈಮಗ್ಗಗಳನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಜವಳಿ ಇಂಜಿನಿಯರ್‌ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ ಅವರಿಂದ ಪರಿಶೀಲನಾ ವರದಿ ಪಡೆದು ಕೈಮಗ್ಗಗಳನ್ನು ತಾಂತ್ರಿಕವಾಗಿ ಸುಧಾರಿಸಿ ನೇಕಾರರಿಗೆ ಆರ್ಥಿಕ ಅನುಕೂಲವಾಗುವಂತೆ ಮಾಡಲಾಗುವುದು ಎಂದು ರಾಜ್ಯದ ಕೈಮಗ್ಗ ಮತ್ತು ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಬ ಪಾಟೀಲ ಮುನೇನಕೊಪ್ಪ ಹೇಳಿದ್ದಾರೆ.
ಅವರು ಉಡುಪಿ ನೇಕಾರರ ಪ್ರಾಥಮಿಕ ಸಹಕಾರ ಸಂಘದಲ್ಲಿ ನಡೆದ ದ.ಕನ್ನಡ ಮತ್ತು ಉಡುಪಿ ಜಿಲ್ಲೆಯ ಕೈಮಗ್ಗ ಮತ್ತು ಜವಳಿ ಇಲಾಖೆ ಅಧಿಕಾರಿಗಳ ಸಭೆ ಹಾಗೂ ಉಡುಪಿ ಜಿಲ್ಲಾ ನೇಕಾರರ ಕುಂದು ಕೊರತೆ ಆಲಿಸಿ ಮಾತನಾಡಿದರು.
ನೇಕಾರಿಕೆಯಲ್ಲಿ ನಷ್ಠ ಎಂಬ ಕಾರಣದಿಂದ ಯುವಜನತೆ ಈ ಉದ್ಯೋಗದಿಂದ ದೂರ ಉಳಿದಿದ್ದಾರೆ. ನೇಕಾರಿಕೆಯಲ್ಲಿ ಆಧುನಿಕ ತಂತ್ರಜ್ಞಾನ ಅಳವಡಿಸುವ ಮೂಲಕ ಅದನ್ನು ಲಾಭದಾಯಕವನ್ನಾಗಿ ಮಾಡಲು ಜವಳಿ ಇಂಜಿನಿಯರ್‌ಗಳು ಮತ್ತು ಜವಳಿ ಪರಿಣಿತರ ತಂಡವನ್ನು ಜಿಲ್ಲೆಗೆ ಕಳುಹಿಸಿ ಅವರ ಮೂಲಕ ವರದಿ ಪಡೆದು ಅದನ್ನು ಆಭಿವೃದ್ಧಿಪಡಿಸಲಾಗುವುದು.
ಜಿಲ್ಲೆಯ ಕಾರ್ಕಳದಲ್ಲಿ ಆರಂಭವಾಗಲಿರುವ ಜವಳಿ ಪಾರ್ಕ್ನಲ್ಲಿ ವೃತ್ತಿಪರ ನೇಕಾರರಿಗೆ ಕೌಶಲ್ಯ ತರಬೇತಿ ನೀಡಲು, ಕೌಶಲ್ಯ ತರಬೇತಿ ಕೇಂದ್ರವನ್ನು ತೆರೆಯಲಾಗುವುದು ಎಂದ ಸಚಿವರು ವಿದ್ಯಾರ್ಥಿಗಳಿಗೂ ಸಹ ಈ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು. ಉಡುಪಿ ಕೈಮಗ್ಗದ ಸೀರೆಗಳಿಗೆ ರಾಜ್ಯ ಮತ್ತು ರಾಷ್ಟ್ರದಲ್ಲಿ ಬೇಡಿಕೆ ಇದೆ ಎಂದರು.
ರಾಜ್ಯದಲ್ಲಿ ನೇಕಾರರನ್ನು ಕೃಷಿಕರೆಂದು ಪರಿಗಣಿಸಿ ಅವರ ಅಭಿವೃದ್ಧಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದ ಸಚಿವರು, ನೇಕಾರ ಸಮ್ಮಾನ ಯೋಜನೆಯಡಿ ಈಗಾಗಲೇ ಮೊತ್ತವನ್ನು ಪಾವತಿಸಲಾಗಿದ್ದು, 122 ಕೋಟಿ ರೂ. ಗಳ ಸಬ್ಸಿಡಿ ನೀಡಲಾಗಿದೆ. ನೇಕಾರರ ಮಕ್ಕಳಿಗೆ ವಿದ್ಯಾರ್ಥಿ ವೇತನ, ನೇಕಾರರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ, ಬಡ್ಡಿ ಸಹಾಯಧನ ಯೋಜನೆಯ ಮೊತ್ತವನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಕೈಮಗ್ಗಗಳನ್ನು ಪುನಃಶ್ಚೇತನಗೊಳಿಸಬೇಕು. ಆಧುನಿಕ ತಂತ್ರಜ್ಞಾನ ಅಳವಡಿಸುವುದರ ಮೂಲಕ ಯುವಜನತೆ ಇದರೆಡೆಗೆ ಆಕರ್ಷಿತವಾಗುವಂತೆ ಹಾಗೂ ಲಾಭದಾಯಕವಾಗುವಂತೆ ಮಾಡಬೇಕು. ಕೈಮಗ್ಗದ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಒದಗಿಸಬೇಕು ಎಂದರು.
ಕೈಮಗ್ಗ ಉತ್ಪನ್ನಗಳಿಗೆ ವಿಧಿಸಲಾಗಿರುವ ಜಿ.ಎಸ್.ಟಿ ದರವನ್ನು ಶೇಕಡ 12 ರಿಂದ 5 ಗೆ ಇಳಿಕೆ ಮಾಡಬೇಕು. ನೇಕಾರರಿಗೆ ನೀಡುವ ಮಜೂರಿ ಮೇಲೆ ಶೇಕಡ 10 ಇನ್ಸೆಂಟಿವ್ ಹಾಗೂ ಪ್ರೋತ್ಸಾಹಧನ ನೀಡಬೇಕು ಎಂದು ನೇಕಾರರು ಸಚಿವರಲ್ಲಿ ಮನವಿ ಮಾಡಿದರು.
ಕೈಮಗ್ಗ ಮತ್ತು ಜವಳಿ ಇಲಾಖೆ ಅಪರ ನಿರ್ದೇಶಕ ಪ್ರಕಾಶ್, ಜಂಟಿ ನಿರ್ದೇಶಕ ಶ್ರೀಧರ ನಾಯ್ಕ್, ಉಡುಪಿ ಜಿಲ್ಲೆಯ ಸಹಾಯಕ ನಿರ್ದೇಶಕ ಅಶೋಕ್, ದ.ಕನ್ನಡ ಜಿಲ್ಲೆಯ ಸಹಾಯಕ ನಿರ್ದೇಶಕ ಶಿವಶಂಕರ್, ನೇಕಾರರ ಸಂಘದ ಅಧ್ಯಕ್ಷ ಅಬ್ನೆಸರ್ ಸತ್ಯಾರ್ಥಿ, ಶಿವಳ್ಳಿ ನೇಕಾರರ ಸಂಘದ ಶಶಿಕಾಂತ್ ಮತ್ತಿತರರು ಉಪಸ್ಥಿತರಿದ್ದರು.
ಉಡುಪಿ ನೇಕಾರರ ಸಂಘದ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಕಾಂಚನ್ ಸ್ವಾಗತಿಸಿ, ವಂದಿಸಿದರು.