ಕೋಟ, ಮಾ. 25: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಶಿವರಾಮ ಕಾರಂತರು ಪ್ರತಿಭೆಯ ಕಣಜ, ಅವರು ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಕನ್ನಡ ನಾಡು-ನುಡಿಗೆ ವಿಶೇಷ ಕೊಡುಗೆ ನೀಡಿದವರು, ಅವರ ನೆನಪಿನಲ್ಲಿ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಸುವ ಸಾಹಿತ್ಯಿಕ-ಸಾಂಸ್ಕೃತಿಕ ಚಟುವಟಿಕೆಗಳು ಶ್ಲಾಘನೀಯ ಎಂದು ಖ್ಯಾತ ಮನೋವೈದ್ಯ ಡಾ. ಸಿ.ಆರ್ ಚಂದ್ರಶೇಖರ್ ಹೇಳಿದರು.
ಅವರು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ಗೆ ಭೇಟಿ ನೀಡಿ ಕಾರಂತರ ಕಂಚಿನ ಮೂರ್ತಿಗೆ ಮಾಲಾರ್ಪಣೆ ಮಾಡಿ, ಆರ್ಟ್ ಗ್ಯಾಲರಿ, ಅಂಗನವಾಡಿ, ಗ್ರಂಥಾಲಯಗಳನ್ನು ವೀಕ್ಷಿಸಿ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ತಾವು ಬರೆದ ಆತ್ಮಕಥನ ಮನೋವೈದ್ಯನ ಆತ್ಮಕಥನದಲ್ಲಿ ಕಾರಂತರ ಬಗ್ಗೆ ಉಲ್ಲೇಖಿಸಿದ ಅಂಶದ ಕುರಿತು ನೆನಪಿಸಿಕೊಂಡು, ಪುಸ್ತಕದ ಪ್ರತಿಯನ್ನು ಗ್ರಂಥಾಲಯಕ್ಕೆ ಕೊಡುಗೆ ನೀಡಿದರು. ಈ ಸಂದರ್ಭದಲ್ಲಿ ಮನೋವೈದ್ಯ ಪ್ರಕಾಶ್ ತೋಳಾರ್, ಆಪ್ತ ಸಮಾಲೋಚಕರಾದ ಸಮರ್ಥ್, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಕಾರಂತ ಥೀಮ್ ಪಾರ್ಕ್ ಸಿಬ್ಬಂದಿಗಳು ಉಪಸ್ಥಿತರಿದ್ದರು.