ಉಡುಪಿ, ಮಾ. 24: ಕರಾವಳಿ ಕಾವಲು ಪೊಲೀಸ್ ಘಟಕದ ಕರಾವಳಿ ಭದ್ರತಾ ತರಬೇತಿ ಸಂಸ್ಥೆಯ 2 ನೇಯ ತಂಡದ ತರಬೇತಿಯ ಸಮಾರೋಪ ಸಮಾರಂಭವು ಮಲ್ಪೆಯ ಸಿಎಸ್‌ಪಿ ಕೇಂದ್ರ ಕಚೇರಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಹೋಮ್‌ಗಾರ್ಡ್ ಕಮಾಂಡೆಂಟ್ ಡಾ. ಪ್ರಶಾಂತ್ ಶೆಟ್ಟಿ ಮಾತನಾಡಿ, ತರಬೇತಿಯಿಂದಾಗಿ ಅಧಿಕಾರಿ ಮತ್ತು ಸಿಬ್ಬಂದಿಗಳು ಹೆಚ್ಚು ಪರಿಣಿತರಾಗಿ ಇಲಾಖೆಯಲ್ಲಿ ಸಮರ್ಥ ರೀತಿಯಲ್ಲಿ ಕರ್ತವ್ಯ ನಿರ್ವಹಿಸಬಹುದಾಗಿದೆ. ತೊಂದರೆಗೀಡಾದ ಸಾರ್ವಜನಿಕರ ಜೀವರಕ್ಷಣೆಗೆ ತರಬೇತಿಯು ಅನುಕೂಲವಾಗಲಿದೆ ಎಂದರು.
ತರಬೇತಿಯಲ್ಲಿ ಪ್ರಥಮ ಸ್ಥಾನ ಪಡೆದ ಸಿಎಸ್‌ಪಿ ಹೆಜಮಾಡಿ ಠಾಣೆಯ ಎಎಸ್‌ಐ ಮೋಹನದಾಸ್, ದ್ವಿತೀಯ ಸ್ಥಾನ ಪಡೆದ ಸಿಎಸ್‌ಪಿ ಮಂಗಳೂರು ಠಾಣೆಯ ಎಎಸ್‌ಐ ಲಿಂಗಪ್ಪ, ಸಿಎಸ್‌ಪಿ ಕೇಂದ್ರ ಕಚೇರಿಯ ಎಪಿಸಿ ಸತೀಶ್, ತೃತೀಯ ಸ್ಥಾನ ಪಡೆದ ಕಾರವಾರ ಠಾಣೆಯ ಸಿಪಿಸಿ ವಿಧ್ಯಾಧರ ನಾಯಕ್ ಹಾಗೂ ಮಹಿಳಾ ವಿಭಾಗದಲ್ಲಿ ಉತ್ತಮ ಸಾಧನೆಗೈದ ಪಿಎಸ್‌ಐ ಅಕ್ಷಯ ಕುಮಾರಿ ಅವರನ್ನು ಸನ್ಮಾನಿಸಲಾಯಿತು. ಕರಾವಳಿ ಕಾವಲು ಪೊಲೀಸ್ ಅಧೀಕ್ಷಕ ಅಬ್ದುಲ್ ಅಹದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರಸ್ವಾಮಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಪೊಲೀಸ್ ನಿರೀಕ್ಷಕ ಪ್ರಮೋದ ಕುಮಾರ್ ಸ್ವಾಗತಿಸಿ, ನಿರೂಪಿಸಿದರು. ನಿಸ್ತಂತು ವಿಭಾಗದ ಪಿ.ಐ ಕರುಣಾಸಾಗರ ವಂದಿಸಿದರು. 15 ದಿನಗಳ ತರಬೇತಿ ಅವಧಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಯೋಗ, ಈಜು, ಸಮುದ್ರ ಈಜು, ಬೋಟ್ ಪೆಟ್ರೋಲಿಂಗ್, ಬೋರ್ಡಿಂಗ್ ಅಪರೇಷನ್, ನೇವಲ್‌ಬೇಸ್ ಭೇಟಿ, ಕೋಸ್ಟ್ಗಾರ್ಡ್ ಭೇಟಿ ಹಾಗೂ ವಿವಿಧ ಉಪನ್ಯಾಸಗಳನ್ನು ಏರ್ಪಡಿಸಲಾಯಿತು.