ಉಡುಪಿ, ಮಾ. 18: ಕಾಂಗ್ರೆಸ್ ಪಕ್ಷದ ಯೋಜನೆಗಳಾದ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ˌ ಗೃಹಿಣಿಯರಿಗೆ ಮಾಸಿಕ 2 ಸಾವಿರ ರೂಪಾಯಿ ಹಾಗೂ ಬಿಪಿಎಲ್ ಕುಟುಂಬ ಸದಸ್ಯರಿಗೆ ಮಾಸಿಕ 10 ಕೆಜಿ ಅಕ್ಕಿ ವಿತರಿಸುವ ಗ್ಯಾರಂಟಿ ಕಾರ್ಡನ್ನು ಜನರು ಕಸದ ಬುಟ್ಟಿಗೆ ಹಾಕುತ್ತಾರೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆಯು ಕಾಂಗ್ರೆಸಿನ ಈ ಯೋಜನೆಗೆ ಮುಖ್ಯಮಂತ್ರಿಗಳು ಭಯಭೀತರಾಗಿದ್ದಾರೆ ಎನ್ನುವುದು ಸ್ವಷ್ಟವಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಭಾಸ್ಕರ ರಾವ್ ಕಿದಿಯೂರು ಹೇಳಿದ್ದಾರೆ. ಪಕ್ಷದ ಈ ಯೋಜನೆಗೆ ಜನಸ್ಪಂದನೆ ಗಮನಿಸಿ ಯೋಜನೆಗಳ ಬಗ್ಗೆ ಅಪನಂಬಿಕೆ ಬರಲು ಮುಖ್ಯಮಂತ್ರಿಗಳು ಈ ಹೇಳಿಕೆ ನೀಡಿರಬಹುದು.
2013ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಜನತೆಗೆ 169 ಭರವಸೆಗಳನ್ನು ನೀಡಿದ್ದು 165 ನ್ನು ಈಡೇರಿಸಲಾಗಿದೆ. ಆದರೆ 2018 ರಲ್ಲಿ 600 ಭರವಸೆಗಳನ್ನು ನೀಡಿದ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಶೇಕಡ 50 ನ್ನು ಮಾತ್ರ ಈಡೇರಿಸಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯು ಜನತೆಗೆ ನೀಡಿದ ಎಲ್ಲಾ ಭರವಸೆಗಳನ್ನು ಕಸದ ಬುಟ್ಟಿಗೆ ಎಸೆದಂತಾಯ್ತು ಎಂದು ಭಾಸ್ಕರ ರಾವ್ ಕಿದಿಯೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.