ಉಡುಪಿ: ಕರ್ನಾಟಕ ರಾಜ್ಯ ಸರ್ಕಾರವು ಕಡಲ ಸಂಪನ್ಮೂಲಗಳ ಸಂರಕ್ಷಣೆ ಮತ್ತು ಸಾಂಪ್ರದಾಯಿಕ ಮೀನುಗಾರರ ಜೀವನೋಪಾಯ ಹಿತದೃಷ್ಟಿಯಿಂದ ಕರಾವಳಿಯಾದ್ಯಂತ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986ರನ್ವಯ ಹಾನಿಕಾರಕ ಮೀನುಗಾರಿಕಾ ಪದ್ಧತಿಗಳನ್ನು ನಿಷೇದಿಸಿದೆ.
ಉಡುಪಿ ಕರಾವಳಿಯಲ್ಲಿ ಬುಲ್ ಟ್ರಾಲ್, ಬೆಳಕು ಮೀನುಗಾರಿಕೆ, ಚೌರಿ, ಚಿಂದಿ, ಕೊಳೆಯುವ ವಸ್ತುಗಳು ಹಾಗೂ ಇನ್ನಿತರ ಸಮುದ್ರ ಮಾಲಿನ್ಯವಾಗುವ ವಸ್ತುಗಳನ್ನು ಉಪಯೋಗಿಸಿ ಅಸಾಂಪ್ರದಾಯಿಕ ರೀತಿಯಲ್ಲಿ ಕಪ್ಪೆ ಬಂಡಾಸ್ ಮೀನು ಹಿಡಿಯುವುದು ಪಚ್ಚಿಲೆ ತೆಗೆಯುವುದು ಇತ್ಯಾದಿ ಅವೈಜ್ಞಾನಿಕ ಮತ್ತು ವಿನಾಶಕಾರಿ ಮೀನುಗಾರಿಕೆ ಪದ್ಧತಿಗಳನ್ನು ನಿಷೇಧಿಸಲಾಗಿರುತ್ತದೆ.
ಇಂತಹ ನಿಷೇಧಿತ ಮೀನುಗಾರಿಕೆ ಪದ್ಧತಿ ಮತ್ತು ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986 ಉಲ್ಲಂಘಿಸಿ ಮೀನುಗಾರಿಕೆ ನಡೆಸುತ್ತಿರುವುದು ಕಂಡುಬಂದಲ್ಲಿ, ಗಂಭೀರವಾಗಿ ಪರಿಗಣಿಸಿ ಅಂತಹ ಬೋಟುಗಳ ಮೇಲೆ ಕರ್ನಾಟಕ ಕಡಲ ಮೀನುಗಾರಿಕೆ ನಿಯಂತ್ರಣ ಕಾಯ್ದೆ 1986 ರನ್ವಯ ಮೀನುಗಾರಿಕಾ ಪರವಾನಗಿ ರದ್ದು ಪಡಿಸುವುದು, ಕರರಹಿತ ಡೀಸಿಲ್ ಸೌಲಭ್ಯವನ್ನು ತಡೆ ಹಿಡಿಯುವುದು, ಹಿಡಿದ ಮೀನಿನ 5 ಪಟ್ಟು ದರದ ದಂಡ ವಿಧಿಸುವುದು ಮುಂತಾದ ಕಟ್ಟುನಿಟ್ಟಿನ ಕ್ರಮಗಳನ್ನು ಮೀನುಗಾರಿಕೆ ಇಲಾಖಾ ವತಿಯಿಂದ ಜರುಗಿಸಲಾಗುವುದೆಂದು ಮೀನುಗಾರಿಕೆ ಜಂಟಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.