ಕೋಟ, ಫೆ. 28: ಯಕ್ಷಗಾನ ಕರಾವಳಿ ಭಾಗದ ಜನರ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಭಾವನಾತ್ಮಕ ಕಲೆಯಾಗಿದ್ದು, ಯಕ್ಷಗಾನ ಕ್ಷೇತ್ರದ ಹಲವಾರು ಗುರುಗಳು ಯಾವ ಫಲಾಫೇಕ್ಷೆಯಿಲ್ಲದೇ ಶಿಷ್ಯರಿಗೆ ಯಕ್ಷಗಾನ ಕಲಿಸಿ ಕಲಾವಿದರನ್ನಾಗಿಸುವ ಸಂಕಲ್ಪ ಮಾಡುತ್ತಾರೆ. ಅಂತಹ ವ್ಯಕ್ತಿಗಳ ಸಾಲಿನಲ್ಲಿ ಸೀತಾರಾಮ ಶೆಟ್ಟಿ ಕೂಡ ಒಬ್ಬರು ಎಂದು ಸಾಂಸ್ಕೃತಿಕ ಚಿಂತಕ ಗಣೇಶ್ ಜಿ ಅವರು ಹೇಳಿದರು. ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.)ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಪ್ರಸ್ತುತಿಯಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಕೋಟ ವೈಕುಂಠ ಯಕ್ಷ ದತ್ತಿ ಪುರಸ್ಕಾರ, ವಿಚಾರ ಸಂಕಿರಣ, ನಾಟಕ ಪ್ರದರ್ಶನ ಸಂಗತಿ-2023 (ಕನಸಿನ ಕಾಲುದಾರಿ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತಾನಾಡುತ್ತಿದ್ದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸೀತಾರಾಮ ಶೆಟ್ಟಿ, ಯಕ್ಷಗಾನಕ್ಕೆ ಹೊಸ ಭಾಷ್ಯ ಬರೆದ ಕೋಟ ವೈಕುಂಠ ಅವರ ಹೆಸರಿನಲ್ಲಿ ಪ್ರಶಸ್ತಿ ಲಭಿಸಿರುವುದು ನನ್ನ ಯೋಗ. ಯಕ್ಷಗಾನ ಕ್ಷೇತ್ರದಲ್ಲಿ ಇನ್ನಷ್ಟೂ ಚಟುವಟಿಕೆ ನಡೆಸುವ ಅಭಿಲಾಷೆಯಿದೆ ಎಂದರು. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಪ್ರಗತಿಪರ ಕೃಷಿಕ ಜಯರಾಮ್ ಶೆಟ್ಟಿ, ಕುಂಭಾಶಿ ಗ್ರಾಮ ಪಂಚಾಯತ್ ಪಿ.ಡಿ.ಓ ಜಯರಾಮ್ ಶೆಟ್ಟಿ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ್ ಆಚಾರ್ಯ, ಸುಶೀಲಾ ಸೋಮಶೇಖರ್, ಕೋಟ ವೈಕುಂಠ ಅವರ ಪುತ್ರಿ ಶಾಲಿನಿ ಉಪಸ್ಥಿತರಿದ್ದರು.
ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಪ್ರಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಸತೀಶ್ ವಡ್ಡರ್ಸೆ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ನಾಗರಾಜ್ ತೆಕ್ಕಟ್ಟೆ ಸಾರಥ್ಯದಲ್ಲಿ ಕಲಾಶಕ್ತಿ ಕಲಾ ಬಳಗ ಕನ್ನುಕೆರೆ ತೆಕ್ಕಟ್ಟೆ ಇವರಿಂದ ನಗೆ ನಗಾರಿ(ನಗೆ ನೂರು ಬಗೆ) ಕಾರ್ಯಕ್ರಮ ನಡೆಯಿತು.