ಕೋಟ, ಫೆ. 22: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್ ಕೊಡಮಾಡುವ ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಯಕ್ಷಗಾನ ನಿರ್ದೇಶಕ ಸೀತಾರಾಮ ಶೆಟ್ಟಿ ಆಯ್ಕೆಯಾಗಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ, ಸ್ತ್ರೀ-ಪುರುಷ ಯಕ್ಷಗಾನ ವೇಷಗಳ ಮೂಲಕ ಪ್ರಸಿದ್ಧಿ ಪಡೆದು ಹಲವಾರು ಸಂಘ ಸಂಸ್ಥೆಗಳ ಮೂಲಕ ಯಕ್ಷಗಾನವನ್ನು ನಿರ್ದೇಶಿಸಿ ಹಲವಾರು ಶಿಷ್ಯರಿಗೆ ಯಕ್ಷಗಾನ ಕಲಿಸಿ, ಬಹುಮುಖ ಕಲಾವಿದರಾಗಿರುವ ಸೀತಾರಾಮ ಶೆಟ್ಟಿ ಅವರನ್ನು ದಿ.ಕೋಟ ವೈಕುಂಠ ದತ್ತಿ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದ್ದು ಫೆ. 25 ರಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ನಂತರ ನೆಗಿ ನಾಗಣ್ಣ ಖ್ಯಾತಿಯ ನಾಗರಾಜ್ ತೆಕ್ಕಟ್ಟೆ ಅವರಿಂದ ನಗೆ ಹಲವು ಬಗೆ ಹಾಸ್ಯ ಕಾರ್ಯಕ್ರಮ ನಡೆಯಲಿದೆ ಎಂದು ಡಾ. ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಉಡುಪಿ ಜಿಲ್ಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.