ಕೋಟ: ಮಾನವ ಹುಟ್ಟುವಾಗ ಒಂದು ಜಂತು. ಶೋಡಷ ಕರ್ಮಗಳಿಂದ ಮಾನವನಾಗುತ್ತಾನೆ. ನಮ್ಮ ಕುಟುಂಬ ವ್ಯವಸ್ಥೆ ಸುಲಲಿತವಾಗಿ ಸಾಗಲು, ಜೀವನ ಸಾರ್ಥಕತೆಗೆ ಇವು ಅವಶ್ಯ. ಇಂದು ಲೌಕಿಕದಲ್ಲಿರುವ ನಮಗೆ ಇಂತಹ ಅನುಷ್ಠಾನಗಳನ್ನು ಮನೆಗಳಲ್ಲಿ ನಡೆಸಲು ಅಸಾಧ್ಯವಾಗುತ್ತದೆ.
ಇದಕ್ಕೆಂದೇ ಪರ್ಯಾಯ ವ್ಯವಸ್ಥೆಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ವೈದಿಕ ಮಂದಿರದ ನಿರ್ಮಾಣ ತುಂಬಾ ಪ್ರಸ್ತುತವಾದುದು ಎಂದು ಕರ್ಣಾಟಕ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಹಾಬಲೇಶ್ವರ ಎಂ.ಎಸ್ ಹೇಳಿದರು.
ಸಾಲಿಗ್ರಾಮದ ಗುಂಡ್ಮಿ ಶ್ರೀ ಭಟ್ಟಮಾಣಿ ಶಂಕರನಾರಾಯಣ ದೇವಸ್ಥಾನ ಬಳಿ ನಿರ್ಮಿಸಲಾದ ನೂತನ ಶ್ರೀ ಮಹಾವಿಷ್ಣು ವೈದಿಕ ಮಂದಿರವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಯಾವುದೇ ವ್ಯವಸ್ಥೆಯನ್ನು ಆರಂಭಿಸುವುದು ಸುಲಭ. ಆದರೆ ಅದನ್ನು ಸುವ್ಯವಸ್ಥಿತವಾಗಿ ಇಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಬೇಕು ಎಂದು ನೂತನ ಮಂದಿರದ ಅಚ್ಚುಕಟ್ಟುತನವನ್ನು ಮೆಚ್ಚಿ ಶ್ಲಾಘಿಸಿದ ಅವರು, ಸಂಸ್ಕಾರ ಪಾಲನೆಯ ಔಚಿತ್ಯವನ್ನು ವಿವರಿಸಿದರು. ಬ್ರಾಹ್ಮಣನಾದವನು ನಿತ್ಯ ಕರ್ಮಾನುಷ್ಠಾನ ಮತ್ತು ದೇವರ ಪೂಜೆಯನ್ನು ಎಂದೂ ತ್ಯಜಿಸಬಾರದು.
ಗೃಹಿಣಿಯರು ಮನೆಯ ಸದಸ್ಯರಿಗೆ ಇವುಗಳಲ್ಲಿ ಪ್ರೇರೇಪಣೆ ನೀಡಬೇಕು ಎಂದು ಅವರು ತಿಳಿಸಿದರು. ನೂತನ ವೈದಿಕ ಮಂದಿರ ನಿರ್ಮಿಸಿ, ಸಂಸ್ಕಾರಗಳನ್ನು ಪಾಲಿಸುವ ಈ ಮಹಾನ್ ಕಾರ್ಯದಲ್ಲಿ ಕರ್ಣಾಟಕ ಬ್ಯಾಂಕ್ ತನ್ನ ಅಳಿಲು ಸೇವೆ ಸಲ್ಲಿಸಿದೆ ಎಂದು ತಿಳಿಸಲು ತಾನು ಸಂತೋಷಿಸುವುದಾಗಿಯೂ ಅವರು ಹೇಳಿದರು.
ಗುಂಡ್ಮಿ ಶ್ರೀ ಭಗವತಿ ಅಮ್ಮನವರ ದೇವಸ್ಥಾನದ ಆಡಳಿತ ಮೊಕ್ತೇಸರ ಜಿ.ಮಹಾಬಲ ಮಯ್ಯ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಕೆ.ಎಸ್.ಕಾರಂತ, ಸದಸ್ಯ ಅನಂತ ಪದ್ಮನಾಭ ಐತಾಳ, ಬೆಂಗಳೂರಿನ ಉದ್ಯಮಿ ಶ್ರೀಧರ್ ಮಯ್ಯ, ನಿವೃತ್ತ ಉಪನ್ಯಾಸಕ ಎಂ.ರಾಮದೇವ ಐತಾಳ ಶುಭಕೋರಿದರು.
ಕಟ್ಟಡ ನಿರ್ಮಾಣ ಸಮಿತಿಯ ಗೌರವ ಅಧ್ಯಕ್ಷ ಜಿ.ಸದಾಶಿವ ಮಯ್ಯ ಅಂಬಲಪಾಡಿ, ಚಂದ್ರಶೇಖರ ಉಪಾಧ್ಯ, ಗುಂಡ್ಮಿ ಶಿವಾನಂದ ಮಯ್ಯ, ರಾಮಚಂದ್ರ ಐತಾಳ ಚಂದ್ರಶೇಖರ ಶಾಸ್ತ್ರಿ, ಕಾರ್ತಿಕ್ ಅಡಿಗ ಮತ್ತಿತರರು ಇದ್ದರು.
ಎಂ. ಎಸ್. ಮಹಾಬಲೇಶ್ವರ – ಅನ್ನಪೂರ್ಣ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಕಟ್ಟಡ ನಿರ್ಮಾತೃ ಇಂಜಿನಿಯರ್ ಕೃಷ್ಣಮೂರ್ತಿ ಐತಾಳ – ಶ್ವೇತಾ ದಂಪತಿಯನ್ನು ಗೌರವಿಸಲಾಯಿತು. ಉದ್ಘಾಟನಾ ಕಾರ್ಯಕ್ರಮಕ್ಕೆ ಮುನ್ನ ಕುಣಿತ ಭಜನೆ ನಡೆಯಿತು.
ಉದಯ ಮಯ್ಯ ವಂದಿಸಿ, ಬಾಲಸುಬ್ರಹ್ಮಣ್ಯ ಐತಾಳ ಕಾರ್ಯಕ್ರಮ ನಿರ್ವಹಿಸಿದರು.