ಮಣಿಪಾಲ, ಫೆ. 7: ಸಾಮರ್ಥಾಭಿವೃದ್ಧಿ ತರಬೇತಿಯಿಂದ ಸಂಜೀವಿನಿ ಯೋಜನೆಯು ಧ್ಯೇಯೋದ್ದೇಶಕ್ಕೆ ಅನುಗುಣವಾಗಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ನವೀನ್ ಕುಮಾರ್ ಎಚ್ ಡಿ ಹೇಳಿದರು. ಜಿಲ್ಲಾ ಸಂಪನ್ಮೂಲ ಕೇಂದ್ರ, ಜಿಲ್ಲಾ ಪಂಚಾಯತ್ ರಜತಾದ್ರಿ ಮಣಿಪಾಲ ಇಲ್ಲಿ ಹಮ್ಮಿಕೊಂಡ 5 ದಿನಗಳ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದ ಸಂಜೀವಿನಿ ಸ್ವ ಸಹಾಯ ಗುಂಪುಗಳ ಮಹಿಳೆಯರಿಗೆ ಮಹಿಳಾ ಸಬಲೀಕರಣದ ಬಗ್ಗೆ ಮನಮುಟ್ಟುವಂತೆ ತರಬೇತಿ ನೀಡಲು ಓರ್ವ ಸ್ವ ಸಹಾಯ ಗುಂಪಿನ ಮಹಿಳೆಯಿಂದ ಮಾತ್ರ ಸಾಧ್ಯ ಎಂದು ಸ್ವ ಸಹಾಯ ಗುಂಪುಗಳಿಂದಲೇ ತಾಲೂಕು ಸಂಪನ್ಮೂಲ ವ್ಯಕ್ತಿಗಳನ್ನು ಆಯ್ಕೆ ಮಾಡಲಾಗಿದೆ. ತರಬೇತಿಯಲ್ಲಿ ಹಾಗೂ ಸ್ವ ಸಹಾಯ ಗುಂಪುಗಳ ತರಬೇತಿ ನಡೆಸುವಾಗ ಕೂಡ ಶೃದ್ಧೆ ಇರಲಿ ಎಂದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ನಾಗರಾಜ್ ಗುಪ್ತ, ಸಂಜೀವಿನಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರಭಾಕರ್ ಆಚಾರ್ ಉಪಸ್ಥಿತರಿದ್ದರು. ಶಿಬಿರಾರ್ಥಿ ಲೋಲಾಕ್ಷಿ ಪ್ರಾರ್ಥನೆ ಹಾಡಿದರು. ಯುವ ವೃತ್ತಿಪರರಾದ ಸಮಂತ್ ಸ್ವಾಗತಿಸಿ, ಯುವ ವೃತ್ತಿಪರರಾದ ಜಯಮಾಲಾ ವಂದಿಸಿದರು. ಜಿಲ್ಲಾ ವ್ಯವಸ್ಥಾಪಕರಾದ ನವ್ಯಾ ಕಾರ್ಯಕ್ರಮ ನಿರೂಪಿಸಿದರು.