ಹಾವಂಜೆ, ಜ. 28: ಸ್ವಚ್ಛ ಪರಿಸರ ನಿರ್ಮಾಣ ಕಾರ್ಯದಲ್ಲಿ ಯುವ ಸಮಯದಾಯದ ಪಾತ್ರ ಪ್ರಮುಖವಾಗಿದ್ದು, ಈ ದಿಸೆಯಲ್ಲಿ ಮಕ್ಕಳಿಗೆ ಪರಿಸರ ಜಾಗೃತಿ ಅರ್ಥಪೂರ್ಣ ಎಂದು ಪರಿಸರ ತಜ್ಞ ಉಪನ್ಯಾಸಕ ಬಾಲಕೃಷ್ಣ ಮುದ್ದೋಡಿ ಹೇಳಿದರು. ಅವರು ಹಾವಂಜೆ ಬಿ.ಬಿ ಹೆಗ್ಡೆ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೋಟದ ಪಂಚವರ್ಣ ಯುವಕ ಮಂಡಲ ಹಾಗೂ ಅಂಗಸಂಸ್ಥೆ ಪಂಚವರ್ಣ ಮಹಿಳಾ ಮಂಡಲ ನೇತೃತ್ವದಲ್ಲಿ ಗೆಳೆಯರ ಬಳಗ ಕಾರ್ಕಡ ಸಹಯೋಗದೊಂದಿಗೆ ಗ್ರಾಮ ವಿಕಾಸ ಸಮಿತಿ ಹಾವಂಜೆ ಅಜಿತ್ ಗೋಳಿಕಟ್ಟೆ ಸಂಯೋಜನೆಯೊಂದಿಗೆ ಪರಿಸರ ಜಾಗೃತಿ ಮಾಹಿತಿ ಕಾರ್ಯಾಗಾರ ೭ನೇ ಮಾಲಿಕೆ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಶುದ್ಧವಾದ ಗಾಳಿ, ನೀರು ಬೆಳಕು ಸಿಗಬೇಕಾದರೆ ಈಗಿನಿಂದಲೇ ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಬೇಕು. ಹಿಂದೆ ಪ್ಲಾಸ್ಟಿಕ ಬಳಕೆ ಅತಿ ಕಡಿಮೆ ಇತ್ತು. ಆದರೆ ಇಂದು ಎಲ್ಲಿ ನೋಡಿದಲ್ಲಿ ಪ್ಲಾಸ್ಟಿಕ್ ಮಯ. ಇದು ಮನುಷ್ಯನ ಅವನತಿಗೆ ಕಾರಣವಾಗುತ್ತಿದೆ. ನಮ್ಮ ಐಷಾರಾಮಿ ಜೀವನದಿಂದ ಪರಿಸರದ ಸಂರಕ್ಷಣೆಯನ್ನು ಮರೆತ್ತಿದ್ದೇವೆ. ಕಾಡು ಕಡಿದು ನಾಡು ಮಾಡುವ ತವಕದಲ್ಲಿ ಹಸಿರನ್ನೆ ಮರೆತ್ತಿದ್ದೇವೆ. ಇದರಿಂದ ಆಮ್ಲಜನಕದ ಪ್ರಮಾಣ ಗಣನೀಯವಾಗಿ ತಗ್ಗಿದೆ ಎಂದರು. ಬಳಿಕ ವಿದ್ಯಾರ್ಥಿಗಳಿಗೆ ಪರಿಸರ ಜಾಗೃತಿ ಪ್ರತಿಜ್ಞಾ ವಿಧಿ ಬೋಧಿದಿಸಿದರು.
ಹಾವಂಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ಗೋಳಿಕಟ್ಟೆ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕ ಸಖರಾಮ್ ಹಾವಂಜೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷೆ ಮೀರಾ ಸತೀಶ್ ಪೂಜಾರಿ, ಉಪಾಧ್ಯಕ್ಷ ರತ್ನಾಕರ್ ಮೊಗವೀರ, ಗ್ರಾಮ ವಿಕಾಸ ಸಮಿತಿ ಅಧ್ಯಕ್ಷ ಸತ್ಯನಾರಾಯಣ ಆಚಾರ್ಯ, ಆಶಾ ಡಿ ಪೂಜಾರಿ, ಗುರುರಾಜ್ ಪೂಜಾರಿ, ಪಂಚವರ್ಣ ಯುವಕ ಮಂಡಲದ ಅಧ್ಯಕ್ಷ ಅಜಿತ್ ಆಚಾರ್ಯ, ಸ್ಥಾಪಕಾಧ್ಯಕ್ಷ ಶೇವಧಿ ಸುರೇಶ್ ಗಾಣಿಗ, ಪಂಚವರ್ಣ ಮಹಿಳಾ ಮಂಡಲದ ಪ್ರೇಮ ಪ್ರಭಾಕರ್ ಆಚಾರ್ಯ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ. ತಾರಾನಾಥ ಹೊಳ್ಳ, ಪಂಚವರ್ಣ ಮಹಿಳಾ ಮಂಡಲದ ವಸಂತಿ ಪೂಜಾರಿ, ಪಂಚವರ್ಣ ಯುವಕ ಮಂಡಲದ ಕೇಶವ ಆಚಾರ್ಯ, ಕಾರ್ತಿಕ್ ಎನ್., ಮತ್ತಿತರರು ಉಪಸ್ಥಿತರಿದ್ದರು. ಪಂಚವರ್ಣ ಕಾರ್ಯಾಧ್ಯಕ್ಷ ರವೀಂದ್ರ ಕೋಟ ಸ್ವಾಗತಿಸಿ ನಿರೂಪಿಸಿ ವಂದಿಸಿದರು.