ಉಡುಪಿ: ನೆಹರು ಯುವ ಕೇಂದ್ರ, ಸಮೃದ್ಧಿ ಮಹಿಳಾ ಮಂಡಳಿ (ರಿ.) ಪೇತ್ರಿ, ಚೇರ್ಕಾಡಿ ಹಾಗೂ ಹೊಸಬೆಳಕು ಸೇವಾ ಟ್ರಸ್ಟ್ (ರಿ.) ರಂಗನಪಲ್ಕೆ, ಕಾರ್ಕಳ ಜಂಟಿ ಆಶ್ರಯದಲ್ಲಿ ತಾಲೂಕು ಯುವ ಮಂಡಲಿಗಳ ಗ್ರಾಮೀಣ ಕ್ರೀಡಾಕೂಟ ನಡೆಯಿತು.
ಸಾಹಿತಿ ಆರೂರು ಮಂಜುನಾಥ ರಾವ್ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ, ಗ್ರಾಮೀಣ ಜನತೆಯೊಂದಿಗೆ ಆಶ್ರಮವಾಸಿಗಳಿಗೂ ಆಯೋಜಿಸಿರುವ ಕ್ರೀಡಾಕೂಟ ಉತ್ತಮ ಪರಿಕಲ್ಪನೆ ಎಂದರು. ಅಂಗವಿಕಲ ಹಾಗೂ ಹಿರಿಯ ನಾಗರಿಕ ಇಲಾಖೆಯ ರತ್ನಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕಾರ್ಕಳ ಭೂ ನ್ಯಾಯ ಮಂಡಳಿಯ ಸದಸ್ಯರಾದ ವಿಕ್ರಮ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಆಶ್ರಮವಾಸಿಗಳನ್ನು ಮುಖ್ಯವಾಹಿನಿಯಲ್ಲಿ ಬೆರೆಯುವಂತೆ ಮಾಡಿದರೆ ಅವರಿಗೂ ಮರಳಿ ಜೀವನ ಲಭಿಸುವುದು ಎಂದರು.
ಸಮೃದ್ಧಿ ಮಹಿಳಾ ಮಂಡಳಿ ಅಧ್ಯಕ್ಷೆ ಪ್ರಸನ್ನಾ ಪ್ರಸಾದ್ ಭಟ್, ಸಾಮಾಜಿಕ ಕಾರ್ಯಕರ್ತರಾದ ಜಗದೀಶ್ ತೆಂಡೂಲ್ಕರ್, ಸಂಪನ್ಮೂಲ ವ್ಯಕ್ತಿ ಉಮೇಶ್ ನಾಯಕ್, ಹೊಸಬೆಳಕು ಆಶ್ರಮದ ಸಂಸ್ಥಾಪಕರಾದ ವಿನಯಚಂದ್ರ, ತನುಲಾ ತರುಣ್, ಸಮಾಜ ಸೇವಕಿ ಗೌತಮಿ, ಗೌರೀಶ್ ಉಪಸ್ಥಿತರಿದ್ದರು.
ತೀರ್ಪುಗಾರರಾಗಿ ಬೈಲೂರಿನ ಜಿ. ಹೆಚ್. ಪಿ .ಶಾಲೆಯ ದೈಹಿಕ ಶಿಕ್ಷಕಿಯರಾದ ಸಂಧ್ಯಾ ಹಾಗೂ ಜಯಲಕ್ಷ್ಮಿ ಸಹಕರಿಸಿದರು. ಮಲ್ಲಿಕಾ ಹರೀಶ್ ಶೆಟ್ಟಿ ಸ್ವಾಗತಿಸಿ ವಿನಯಚಂದ್ರ ವಂದಿಸಿದರು. ವನಿತಾ ಪಿ. ಶೆಟ್ಟಿ ಹಾಗೂ ಸಹನಾ ಕೆ. ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.