ಉಡುಪಿ: ಕೊಡವೂರು ದಿವ್ಯಾಂಗ ರಕ್ಷಣಾ ಸಮಿತಿ, ಮಠದಬೆಟ್ಟು ಯುವಕ ಮಂಡಲ ಮಠದಬೆಟ್ಟು ಮತ್ತು ಬೆಲ್—ಓ—ಸೀಲ್ ಮಜ್ಧೂರ್ ಸಂಘ ಸಂತೆಕಟ್ಟೆ ಆಶ್ರಯದಲ್ಲಿ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮ ನಗರಸಭಾ ಸದಸ್ಯ ವಿಜಯ್ ಕೊಡವೂರು ನೇತೃತ್ವದಲ್ಲಿ ಬನ್ನಂಜೆಯ ಬ್ರಹ್ಮರ್ಷಿ ಶ್ರೀ ನಾರಾಯಣಗುರು ಮಂದಿರ ಸಭಾಂಗಣದಲ್ಲಿ ಆಚರಿಸಲಾಯಿತು.
ಬೆನ್ನುಮೂಳೆ ಮುರಿತಕ್ಕೊಳಗಾಗಿ ದುಡಿಯಲು ಸಾಧ್ಯವಿಲ್ಲದಂತಹ ಬಡವರಿಗೆ, ಹಾಗೂ ದುರ್ಬಲರು ಹಾಗೂ ಅಶಕ್ತರನ್ನು ಗುರುತಿಸಿ ಅಕ್ಕಿ ಹಾಗೂ ಔಷಧಗಳನ್ನು ವಿತರಿಸಲಾಯಿತು. ಇದರೊಂದಿಗೆ ಸ್ವಂತ ಉದ್ಯೋಗದಿಂದ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಹಾಯ ಮಾಡುವ ದೃಷ್ಟಿಯಿಂದ ಅರ್ಹ ವ್ಯಕ್ತಿಗಳಿಗೆ ಬತ್ತಿಕಟ್ಟುವ ಯಂತ್ರ, ಹೊಲಿಗೆ ಯಂತ್ರ, ಅಂಗವಿಕಲರಿಗೆ ಗಾಲಿ ಕುರ್ಚಿಗಳನ್ನು ದಾನಿಗಳ ಸಹಾಯದಿಂದ ಉಚಿತವಾಗಿ ವಿತರಿಸಲಾಯಿತು.
ಪೋಲೀಸ್ ಅಧಿಕಾರಿ ಪ್ರಮೋದ್ ಕುಮಾರ್ ಪಿ ಇವರನ್ನು ಸನ್ಮಾನಿಸಲಾಯಿತು. ಮಠದಬೆಟ್ಟು ಯುವಕ ಸಂಘದ ಅಧ್ಯಕ್ಷ ಉದಯ ಪೂಜಾರಿ, ಕೊಲ್ಲೂರು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸಂಧ್ಯಾ ರಮೇಶ್, ಪ್ರಮೋದ್ ಉಚ್ಛಿಲ, ಕೊಡವೂರು ವಾರ್ಡ್ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಶೋಕ್ ಶೆಟ್ಟಿಗಾರ್, ಕೊಡವೂರು ಸಿಎ ಬ್ಯಾಂಕ್ ಅಧ್ಯಕ್ಷರಾದ ನಾರಾಯಣ್ ಬಲ್ಲಾಳ್, ರತ್ನಾಕರ್ ದೇವಾಡಿಗ, ಸೇವಾ ಧಾಮ ಕನ್ಯಾಡಿ ಅಧ್ಯಕ್ಷರಾದ ವಿನಾಯಕ್ ರಾವ್ ಮುಂತಾದವರು ಉಪಸ್ಥಿತರಿದ್ದರು. ಯಶೋಧ ಕೇಶವ ಸ್ವಾಗತಿಸಿ, ಸ್ವಾತಿ ಆಚಾರ್ಯ ಕಾರ್ಯಕ್ರಮವನ್ನು ನಿರೂಪಿಸಿದರು.