ಉಡುಪಿ: ಸಾರಸ್ವತ ಸಮಾಜದ ಆದ್ಯಪೀಠ ಗೋವಾದ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠ ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠದೊಂದಿಗೆ ಸ್ವಸಮಾಜದ ಬಾಂಧವರು ನಿರಂತರ ನಿಕಟ ಸಂಪರ್ಕವನ್ನು ಬೆಳೆಸುವ ಉದ್ದೇಶದಿಂದ, ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಕೈವಲ್ಯ ಮಠ ಮಠದ 17ನೇ ಶಾಖಾ ಮಠವನ್ನು ಇಲ್ಲಿನ ಆತ್ರಾಡಿ ಪರಿಕ ರಸ್ತೆಯಲ್ಲಿ ಭವ್ಯವಾಗಿ ನಿರ್ಮಿಸಲಾಗಿದೆ.
ಈ ನೂತನ ಶಾಖಾ ಮಠವನ್ನು ಶ್ರೀ ಕೈವಲ್ಯ ಮಠಾಧೀಶರಾದ ಶ್ರೀಮದ್ ಶಿವಾನಂದ ಸರಸ್ವತಿ ಸ್ವಾಮೀ ಮಹಾರಾಜ್ ಅವರು ಡಿ.11 ರಂದು ಸಂಜೆ ೩ ಗಂಟೆಗೆ ತಮ್ಮ ದಿವ್ಯಹಸ್ತದಿಂದ ತಮ್ಮ ಆರಾಧ್ಯಮೂರ್ತಿ ಶ್ರೀ ಭವಾನೀ ಶಂಕರ ದೇವರಿಗೆ, ಆ ಮೂಲಕ ಸಾರಸ್ವತ ಸಮಾಜಕ್ಕೆ ಅರ್ಪಣೆ ಮಾಡಲಿದ್ದಾರೆ.
ಮುಖ್ಯ ಅಭ್ಯಾಗತರಾಗಿ ರಾಜ್ಯದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್, ಉಡುಪಿಯ ಶಾಸಕರಾದ ಕೆ.ರಘುಪತಿ ಭಟ್ ಮತ್ತು ಕಾಪು ಶಾಸಕರಾದ ಲಾಲಾಜಿ ಮೆಂಡನ್ ಹಾಗೂ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ಇದಕ್ಕೆ ಪೂರ್ವಭಾವಿಯಾಗಿ ಶ್ರೀ ಸ್ವಾಮೀಜಿ ಅವರು ಡಿ.10ರಂದು ಸಂಜೆ ಶ್ರೀಮಠವನ್ನು ಪ್ರವೇಶಗೈಯ್ಯಲಿದ್ದಾರೆ. ಈ ಪ್ರಯುಕ್ತ ಅವರನ್ನು ಸಂಜೆ 4 ಗಂಟೆಗೆ ಪರ್ಕಳ ಹೈಸ್ಕೂಲು ಬಳಿಯಿಂದ ಭವ್ಯವಾದ ಶೋಭಾಯಾತ್ರೆಯ ಮೂಲಕ ಶ್ರೀಮಠಕ್ಕೆ ಕರೆತರಲಾಗುತ್ತದೆ.
ಶ್ರೀ ಸ್ವಾಮೀಜಿ ಅವರು ಡಿ.17ರವರೆಗೆ ನೂತನ ಶಾಖಾ ಮಠದಲ್ಲಿ ಮೊಕ್ಕಾಂ ಇರಲಿದ್ದು, ಶ್ರೀ ಭವಾನೀ ಶಂಕರ ದೇವರ ಪೂಜೆ, ಶ್ರೀಗಳಿಗೆ ಭಿಕ್ಷಾ ಪ್ರದಾನ, ಪಾದ್ಯಪೂಜೆ ಇತ್ಯಾದಿಗಳು ನಡೆಯಲಿವೆ ಎಂದು ಕೈವಲ್ಯ ಶಾಖಾ ಮಠ, ಆತ್ರಾಡಿ ಅಧ್ಯಕ್ಷರಾದ ಸಂತೋಷ್ ವಾಗ್ಳೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ರಾಜಾಪುರ ಸಾರಸ್ವತ ಬ್ರಾಹ್ಮಣ ಸಂಘ, ಮಣಿಪಾಲ ನಿಕಟಪೂರ್ವ ಅಧ್ಯಕ್ಷ ಶ್ರೀಶ ನಾಯಕ್ ಪೆರ್ಣಂಕಿಲ, ನರಸಿಂಗೆ ನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ರಮೇಶ್ ಸಾಲ್ವಂಕಾರ್, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಬಂಟಕಲ್ಲು ಆಡಳಿತ ಮೊಕ್ತೇಸರ ಶಶಿಧರ ವಾಗ್ಳೆ, ದುರ್ಗಾಪರಮೇಶ್ವರಿ ಸೊಸೈಟಿ ಪರ್ಕಳ ಸಿಇಓ ನಿತ್ಯಾನಂದ ನಾಯಕ್, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಉಪೇಂದ್ರ ನಾಯಕ್ ಉಪಸ್ಥಿತರಿದ್ದರು.