ಉಡುಪಿ: ಹೆಲಿಕಾಪ್ಟರ್ ಪತನಗೊಂಡು ವಿಧಿವಶರಾದ ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಗೆ ಇಂದು ಅಜ್ಜರಕಾಡು ಹುತಾತ್ಮ ಸೈನಿಕ ಸ್ಮಾರಕದಲ್ಲಿ ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೊಸಿಯೇಶನ್ ಉಡುಪಿ ವಲಯ, ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಮೊಂಬತ್ತಿ ಬೆಳಗಿಸಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಮಾತನಾಡುತ್ತಾ, ಅಲ್ಪಾವಧಿಯಲ್ಲಿ ಸೇನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರುವಲ್ಲಿ ಜನರಲ್ ಬಿಪಿನ್ ರಾವತ್ ಅವರು ಪ್ರಮುಖ ಪಾತ್ರ ವಹಿಸಿದ್ದರು. ಅವರೊಬ್ಬ ಅಧ್ಯಯನಶೀಲ ಸೇನಾಧಿಕಾರಿಯಾಗಿದ್ದು ಹಲವರಿಗೆ ಪ್ರೇರಣಾಶಕ್ತಿ ಎಂದರು.
ಸೇನೆಯಲ್ಲಿ ಹಲವಾರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಯೋಧ ಕೃಷ್ಣ ಶೆಟ್ಟಿಬೆಟ್ಟು ಮಾತನಾಡಿ, ಬಿಪಿನ್ ರಾವತ್ ಅವರ ಅಧಿಕಾರಾವಧಿಯಲ್ಲಿ ಸೇನೆಯಲ್ಲಿ ಕಾರ್ಯನಿರ್ವಹಿಸಿದ್ದು ಹೆಮ್ಮೆಯ ವಿಷಯ.
ಸರಕಾರಿ ಸಂಬಳಕ್ಕಾಗಿ ಸೇನೆಯನ್ನು ಸೇರಬೇಡಿ, ದೇಶಕ್ಕಾಗಿ ಅರ್ಪಣಾ ಮನೋಭಾವ, ಕೆಚ್ಚೆದೆಯ ಸ್ವಭಾವ ಇದ್ದರೆ ಮಾತ್ರ ಸೇನೆಗೆ ಸೇರಿ ಎಂದು ಪ್ರತಿ ಬಾರಿಯೂ ಬಿಪಿನ್ ರಾವತ್ ಸ್ಪೂರ್ತಿದಾಯಕವಾಗಿ ಮಾತನಾಡಿ ಹಲವಾರು ಮಂದಿ ಸೇನೆಗೆ ಸೇರಲು ಕಾರಣರಾಗಿದ್ದರು. ಇಂತಹ ಸೇನಾಧಿಕಾರಿ ಮುಂದೆ ಸಿಗುವುದು ಕಷ್ಟಸಾಧ್ಯ ಎಂದರು.
ಎಸ್.ಕೆ.ಪಿ.ಎ ಕಾರ್ಯದರ್ಶಿ ಪ್ರವೀಣ್ ಕೊರೆಯ, ಉಪಾಧ್ಯಕ್ಷ ಸುರಭಿ ಸುದೀರ್ ಶೆಟ್ಟಿ, ಮಾಜಿ ಅಧ್ಯಕ್ಷರುಗಳಾದ ಕೆ ವಾಸುದೇವ ರಾವ್, ಅನಿಶ್ ಶೆಟ್ಟಿಗಾರ್, ಆಸ್ಟ್ರೋ ಮೋಹನ್, ದಾಮೋದರ್ ನಿಟ್ಟೂರ್, ಸುರಭಿ ರತನ್, ಎಲ್ಲೂರು ರಮೇಶ್ ಭಟ್, ಉದಯ ನಾಯ್ಕ್, ದಯಾನಂದ್, ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ, ಗಣೇಶ್ ಪ್ರಸಾದ್ ಜಿ. ನಾಯಕ್, ಮಾಜಿ ಸೈನಿಕ ವಾದಿರಾಜ ಹೆಗ್ಡೆ, ರಾಘವೇಂದ್ರ ಪ್ರಭು ಕರ್ವಾಲು, ಜಗದೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸೌತ್ ಕೆನರಾ ಫೊಟೊಗ್ರಾಫರ್ಸ್ ಅಸೊಸಿಯೇಶನ್ ಉಡುಪಿ ವಲಯಾಧ್ಯಕ್ಷ ಜನಾರ್ದನ ಕೊಡವೂರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.