ಉಡುಪಿ: ನಗರ ಕೇಂದ್ರ ಗ್ರಂಥಾಲಯ ಉಡುಪಿ ಇವರ ವತಿಯಿಂದ ಅಜ್ಜರಕಾಡು ವಿದ್ಯಾ ವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಸ್ಮಾರಕ ನಗರ ಕೇಂದ್ರ ಗ್ರಂಥಾಲಯದ ಮಕ್ಕಳ ಸಮುದಾಯ ಕೇಂದ್ರದಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದ ಅಂಗವಾಗಿ ಮಕ್ಕಳಿಗೆ ಅಮ್ಮನಿಗಾಗಿ ಒಂದು ಪುಸ್ತಕ ಮತ್ತು ಪತ್ರ ಬರೆಯುವ ಅಭಿಯಾನ ಕಾರ್ಯಕ್ರಮ ನಡೆಯಿತು.
ಸಾಹಿತಿ ಹಾಗೂ ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯೆ ವಸಂತಿ ಶೆಟ್ಟಿ ಬ್ರಹ್ಮಾವರ ಕಾರ್ಯಕ್ರಮ ಉದ್ಘಾಟಿಸಿ, ಗ್ರಂಥಾಲಯಗಳ ಮೂಲಕ ಮಕ್ಕಳು ನಿರಂತರವಾಗಿ ಅನೇಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಾಧ್ಯ. ಪೋಷಕರು ಗ್ರಂಥಾಲಯದಲ್ಲಿನ ಪುಸ್ತಕವನ್ನು ಓದುವುದರ ಮೂಲಕ ಮಕ್ಕಳು ಪುಸ್ತಕದ ಮೇಲೆ ಅಭಿರುಚಿ ಬೆಳೆಸಿಕೊಳ್ಳುವಂತಾಗಬೇಕು. ಗ್ರಂಥಾಲಯಗಳಲ್ಲಿ ಮಕ್ಕಳು ನಿಯಮಿತವಾಗಿ ಬರೆಯುವ ಅಭ್ಯಾಸ ಮಾಡಲು ಅವಕಾಶ ಕಲ್ಪಿಸುವುದು ಹಾಗೂ ಪ್ರೋತ್ಸಾಹಿಸುವುದು ಅತ್ಯವಶ್ಯಕವಾಗಿದೆ ಎಂದರು.
ಪೋಷಕರು ಹೇಳಿದ ಕಥೆಗಳನ್ನು ಮಕ್ಕಳು ತಮ್ಮ ನುಡಿಗಳ ಮೂಲಕ ವ್ಯಕ್ತಪಡಿಸಿದರು. ಮಕ್ಕಳ ಸಮುದಾಯ ಕೇಂದ್ರದ ಮೇಲ್ವಿಚಾರಕಿ ಆಶಾಲತಾ ಉಪಸ್ಥಿತರಿದ್ದರು. ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ ಸ್ವಾಗತಿಸಿದರು. ಗ್ರಂಥಪಾಲಕಿ ರಂಜಿತಾ ನಿರೂಪಿಸಿ, ಪ್ರಥಮ ದರ್ಜೆ ಸಹಾಯಕಿ ಪ್ರೇಮ ಎಂ. ವಂದಿಸಿದರು.