ಉಡುಪಿ: ಶ್ರೀ ಕೃಷ್ಣಮಠದ ಮಧ್ವ ಮಂಟಪದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಆಶ್ರಯದಲ್ಲಿ ಶ್ರೀ ಹಂಡೆದಾಸ ಪ್ರತಿಷ್ಠಾನ (ರಿ.) ಕಾರ್ಕಳ ಇದರ ವಾರ್ಷಿಕೋತ್ಸವದ ಅಂಗವಾಗಿ ದಿನಾಂಕ 20.09.2021 ಸೋಮವಾರದಿಂದ 07.10.2021 ಗುರುವಾರದವರೆಗೆ 18 ದಿನಗಳ ಪರ್ಯಂತ ನಡೆಯುತ್ತಿರುವ ‘ಶ್ರೀನಿವಾಸ ಕಲ್ಯಾಣ’ದ ಹರಿಕಥಾ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಪರ್ಯಾಯ ಮಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆಯನ್ನು ವಹಿಸಿ, ಭಾಗವತದ ಕಥೆಗಳನ್ನು ಅಧ್ಯಯನ ಮಾಡಿ ಇತರರೊಂದಿಗೆ ಹರಿಕಥೆಯ ಮೂಲಕ ಮಾಡಿಸಿ ಸಾಮಾನ್ಯ ಜನರಿಗೆ ಭಗವಂತನ ಮಹಿಮೆಗಳನ್ನು ಪ್ರಸಾರ ಮಾಡಿ ಅದರ ಮೂಲಕ ತಮ್ಮ ತಂದೆ, ಅಜ್ಜ ಮುಂತಾದ ಹರಿದಾಸರ ಪರಂಪರೆಯನ್ನು ಮುಂದುವರಿಸುವಲ್ಲಿ ರುಕ್ಮಿಣಿ ಹಂಡೆಯವರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಅವರನ್ನು ಮತ್ತು ಎಲ್ಲರನ್ನೂ ದೇವರು ಅನುಗ್ರಹಿಸಲಿ ಎಂದು ಹಾರೈಸಿದರು.
ಅತಿಥಿಗಳಾದ ವಿದ್ವಾಂಸರಾದ ಎಂ.ಎಲ್.ಸಾಮಗ ಮಾತನಾಡಿ, ಇಂದಿನ ದಿನಗಳಲ್ಲಿ ಹರಿಕಥೆಯಂತಹ ಉತ್ತಮ ಕಲೆಯನ್ನು ಇಷ್ಟು ಮಂದಿಗೆ ಹೇಳಿ ಅವರಿಂದ ಕಥೆ ಹೇಳಿಸಿ ಇತರರನ್ನು ಬೆಳೆಸುವಂತಹ ರುಕ್ಮಿಣಿ ಹಂಡೆಯವರನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯ, ನಮ್ಮ ಜವಾಬ್ದಾರಿ ಎಂದರು. ಪ್ರತಿಷ್ಠಾನದ ಉಪಾಧ್ಯಕ್ಷರಾದ ವೇದವ್ಯಾಸ ಐತಾಳ ಸ್ವಾಗತಿಸಿ, ಪ್ರತಿಷ್ಠಾನದ ಸದಸ್ಯರಾದ ರಾಮಚಂದ್ರ ಉಪಾಧ್ಯಾಯ ಕಾರ್ಯಕ್ರಮ ನಿರ್ವಹಿಸಿದರು.