ಕಟಪಾಡಿ: ರೋಟರಿ ಶಂಕರಪುರದ ವತಿಯಿಂದ ದೀಪಾವಳಿ ಆಚರಣೆ ಹಾಗೂ ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ರೋಟರಿ ಜಿಲ್ಲೆ 3182 ರ ವಲಯ 5 ರ ಸಹಾಯಕ ಗವರ್ನರ್ ಡಾ. ಶಶಿಕಾಂತ ಕರಿಂಕ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ರೋಟರಿ ಸಾಕ್ಷರತೆಗೆ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಿದ್ದು, ರೋಟರಿ ಇಂಡಿಯಾ ಲಿಟರಸಿ ಮಿಷನ್ ಮೂಲಕ ಸಾಕ್ಷರತಾ ಕಾರ್ಯಕ್ರಮದ ಅಡಿಯಲ್ಲಿ ಶಾಲೆಗಳ ಸಬಲೀಕರಣ, ಶಿಕ್ಷಣದ ಗುಣಮಟ್ಟದ ಪೂರಕ ಯೋಜನೆ, ತರಬೇತಿ ಮತ್ತು ಪ್ರತಿಭಾನ್ವಿತ ಶಿಕ್ಷಕರನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡುವ ಮೂಲಕ ಪ್ರೋತ್ಸಾಹಿಸುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ದೀಪಾವಳಿ ಆಚರಣೆಯ ಮಹತ್ವದ ಕುರಿತು ಮಾತನಾಡಿದರು.
ವಿವಿಧ ಶಾಲೆಗಳ ಪ್ರತಿಭಾನ್ವಿತ ಶಿಕ್ಷಕರಾದ ಇನ್ನಂಜೆ ಎಸ್.ವಿ.ಎಚ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಸತೀಶ್ ನಾಯಕ್, ಪಾಂಗಳ ವಿದ್ಯಾವರ್ಧಕ ಪ್ರೌಢಶಾಲೆಯ ಕಲ್ಯಾಣಿ, ಎಸ್.ವಿ.ಎಚ್. ಹೈ ಸ್ಕೂಲ್ ಇನ್ನಂಜೆ ಇದರ ವಿಶ್ವನಾಥ ನಾಯ್ಕ್, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಯಶ್ರೀ ಕೆ., ಸೈಂಟ್ ಜಾನ್ಸ್ ಅಕಾಡೆಮಿ ಹೈಸ್ಕೂಲ್ ಶಂಕರಪುರ ಇಲ್ಲಿಯ ಶಿಕ್ಷಕಿ ಸವಿತಾ ಮುರಳೀಧರ್, ಸೈಂಟ್ ಜಾನ್ಸ್ ಕನ್ನಡ ಮೀಡಿಯಂ ಹೈ ಸ್ಕೂಲ್ ಇದರ ಸುನೀತಾ ಲೀನಾ ಡಿಸೋಜ ಇವರುಗಳಿಗೆ ನೇಶನ್ ಬಿಲ್ಡರ್ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಸನ್ಮಾನಿತರ ಪರವಾಗಿ ವಿಶ್ವನಾಥ್ ನಾಯ್ಕ್ ಮಾತನಾಡಿದರು. ರೇಣುಕಾ ಆರ್ ವಾಲ್ಮೀಕಿ ಮನವಿಯ ಮೇರೆಗೆ ಮಗುವಿನ ಚಿಕಿತ್ಸೆಗೆ ರೋಟರಿ ಟ್ರಸ್ಟ್ ವತಿಯಿಂದ 10,000 ರೂ ಚೆಕ್ ನ್ನು ಡಾ. ಶಶಿಕಾಂತ ಕರಿಂಕ ವಿತರಿಸಿದರು.
ರೋಟರಿ ಶಂಕರಪುರದ ಜನೋಪಯೋಗಿ ಕಾರ್ಯಕ್ರಮಗಳಲ್ಲಿ ಒಂದಾದ ಉಚಿತ ಮಾನಸಿಕ ಶಿಬಿರವು ಪ್ರತಿ ತಿಂಗಳ ಮೊದಲ ಭಾನುವಾರ ಸುಮಾರು 18 ವರ್ಷಗಳಿಂದ ನಡೆಯುತ್ತಿದೆ. ಈ ಶಿಬಿರದ ಮೆಡಿಸಿನ್ ವಿಭಾಗದಲ್ಲಿ 18 ವರ್ಷಗಳ ಕಾಲ ಉಚಿತ ಸೇವೆಯನ್ನು ನೀಡುತ್ತಾ ಬಂದಿರುವ ನಾಗರಾಜ್ ಮೂರ್ತಿ ಹಾಗೂ ಅವರ ಧರ್ಮಪತ್ನಿಯವರನ್ನು ರೋಟರಿಯ ಎಲ್ಲಾ ಹಿರಿಯ ಸದಸ್ಯರು ಸನ್ಮಾನಿಸಿದರು.
ಅಂಥೋನಿ ಡೇಸಾ ನೇಶನ್ ಬಿಲ್ಡರ್ ಪ್ರಶಸ್ತಿ ಬಗ್ಗೆ ಮಾಹಿತಿ ನೀಡಿದರು. ಜೇರೋಮ್ ರೋಡ್ರಿಗಸ್ ನಾಗರಾಜ್ ಮೂರ್ತಿಯವರನ್ನು ಪರಿಚಯಿಸಿದರು. ಮಾಲಿನಿ ಶೆಟ್ಟಿ ಡಾ. ಶಶಿಕಾಂತ್ ಕರಿಂಕರವರ ಪರಿಚಯವನ್ನು ವಾಚಿಸಿದರು. ವೇದಿಕೆಯಲ್ಲಿ ಕ್ಲಬ್ ಸರ್ವಿಸ್ ಡೈರೆಕ್ಟರ್ ಫ್ರಾನ್ಸಿಸ್ ಡೇಸಾ ಉಪಸ್ಥಿತರಿದ್ದರು. ಅಧ್ಯಕ್ಷ ಗ್ಲಾಡ್ಸನ್ ಕುಂದರ್ ಸಭಾಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾರ್ಯದರ್ಶಿ ಸಿಲ್ವಿಯ ಕಾಸ್ಟಲಿನೋ ವಂದಿಸಿದರು.