ಉಡುಪಿ: ಹೊಸ ಶಿಕ್ಷಣ ನೀತಿಯ ಆಶಯದಂತೆ, ಜಿಲ್ಲೆಗೊಂದು ವಿಶ್ವವಿದ್ಯಾನಿಲಯವನ್ನು ಆರಂಭಿಸಲು ಶಿಫಾರಸ್ಸು ಮಾಡಿದೆ. ಅದರಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ವಿಶ್ವವಿದ್ಯಾನಿಲಯ ಆರಂಭವಾಗಲಿದೆ. ಶೈಕ್ಷಣಿಕವಾಗಿ ಸಮೃದ್ಧವಾಗಿರುವ ಸುಮಾರು 35 ಕ್ಕೂ ಮಿಕ್ಕಿ ಪ್ರಥಮ ದರ್ಜೆ ಕಾಲೇಜುಗಳನ್ನು ಹೊಂದಿರುವ 25 ಸಾವಿರಕ್ಕೂ ಮಿಕ್ಕ ಪಾರಂಪರಿಕ ಪದವಿ ವಿದ್ಯಾರ್ಥಿಗಳನ್ನು ಹೊಂದಿರುವ ಉಡುಪಿ ಜಿಲ್ಲೆಗೆ ಹೊಸದಾಗಿ ವಿಶ್ವವಿದ್ಯಾನಿಲಯದ ಸ್ಥಾಪನೆಗೆ ಕೂಡಲೇ ಮಂಜೂರು ಮಾಡಿಸಿ, ವಿಶ್ವವಿದ್ಯಾನಿಲಯವನ್ನು ಆರಂಭ ಮಾಡಿಸುವಂತೆ ನಿವೃತ್ತ ಉಪಕುಲಪತಿಗಳಾದ ಪ್ರೊ. ಬಿ.ಎಸ್. ಶೇರಿಗಾರ್‌ರವರ ನೇತೃತ್ವದ ಉಡುಪಿ ಜಿಲ್ಲೆಯ ಶಿಕ್ಷಣ ಪ್ರೇಮಿಗಳ ನಿಯೋಗ ಉಡುಪಿ ಶಾಸಕ ಕೆ. ರಘುಪತಿ ಭಟ್‌ರವರಿಗೆ ಮನವಿ ಸಲ್ಲಿಸಿತು.
ಉಡುಪಿ ಜಿಲ್ಲೆಗೆ ಸಾರ್ವಜನಿಕ ನೆಲೆಯ ಸಾಮಾನ್ಯ ವಿಶ್ವವಿದ್ಯಾನಿಲಯದ ಸ್ಥಾಪನೆ ಹೆಚ್ಚು ಅವಶ್ಯಕ. ಪ್ರಸ್ತುತ ಮತ್ತು ಸಮಯೋಚಿತ ಎಂಬ ನೆಲೆಯಲ್ಲಿ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸುವ ಪ್ರಸ್ತಾವನೆಗೆ ಸರಕಾರದ ಮಂಜೂರಾತಿ ದೊರಕಿಸಿಕೊಡುವಂತೆ ಒತ್ತಾಯಿಸಲಾಯಿತು.
ನಿಯೋಗದಲ್ಲಿ ನಿವೃತ್ತ ಪ್ರಾಂಶುಪಾಲರಾದ ಡಾ. ಗಣನಾಥ ಎಕ್ಕಾರ್, ಡಾ. ಜಗದೀಶ ಶೆಟ್ಟಿ, ಪ್ರೊ. ಶಿವಾನಂದ ನಾಯಕ್, ಪಿ.ಪಿ.ಸಿ ಪ್ರಾಂಶುಪಾಲರಾದ ಡಾ. ರಾಘವೇಂದ್ರ, ಉಡುಪಿ ಜಿಲ್ಲಾ ಲೀಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಭಾಸ್ಕರ ಶೆಟ್ಟಿ ಎಸ್ ಉಪಸ್ಥಿತರಿದ್ದರು.