ಉಡುಪಿ: ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ವತಿಯಿಂದ ಪ್ರದಾನ ಮಾಡಲಾಗುವ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ 2022’ ರಾಜ್ಯದ ಮೂವರು ಹಿರಿಯ ಸಾಹಿತಿಗಳಿಗೆ ನೀಡಲಾಯಿತು.
ಬೆಂಗಳೂರಿನ ಎಚ್. ದಂಡಪ್ಪ (ವಿಮರ್ಶಕರು), ಮಂಗಳೂರಿನ ಡಾ. ರತಿದೇವಿ ಆರ್ (ವೈದ್ಯಕೀಯ ಸಾಹಿತ್ಯ), ಉಡುಪಿಯ ಎಚ್ ಗೋಪಾಲ ಭಟ್ಟ ಕು.ಗೋ (ಸಾಹಿತ್ಯ ಪರಿವ್ರಾಜಕ) ಇವರಿಗೆ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಕನ್ನಡ ರಾಜ್ಯೋತ್ಸವ ದಿನಾಚರಣೆಯ ಸಂದರ್ಭದಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪತ್ರ, ಫಲಕ ಹಾಗೂ ಬೆಳ್ಳಿ ಪದಕದೊಂದಿಗೆ ‘ಮಲಬಾರ್ ವಿಶ್ವಸಾಹಿತ್ಯ ಪುರಸ್ಕಾರ’ ಪ್ರದಾನ ಮಾಡಲಾಯಿತು.
ಸಭಾಧ್ಯಕ್ಷತೆಯನ್ನು ಹಿರಿಯ ವಿದ್ವಾಂಸ ನಾಡೋಜ ಕೆ.ಪಿ ರಾವ್ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತು ಕುಂದಾಪುರ ತಾಲೂಕು ಅಧ್ಯಕ್ಷ ಡಾ. ಉಮೇಶ್ ಪುತ್ರನ್, ಕವಿ ಮುದಲ್ ವಿಜಯ್, ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಗೌರವಾಧ್ಯಕ್ಷ ಉಡುಪಿ ವಿಶ್ವನಾಥ ಶೆಣೈ, ಅಧ್ಯಕ್ಷ ಪ್ರೊ ಶಂಕರ್, ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ನ ಪುರಂದರ ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಅಧ್ಯಕ್ಷ ರವಿರಾಜ್ ಹೆಚ್ ಪಿ ಸ್ವಾಗತಿಸಿ, ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರದ ಸಂಚಾಲಕಿ ಪೂರ್ಣಿಮಾ ಜನಾರ್ಧನ್ ನಿರೂಪಿಸಿದರು. ರಾಘವೇಂದ್ರ ಪ್ರಭು ಕರ್ವಾಲು ವಂದಿಸಿದರು.