ಬ್ರಹ್ಮಾವರ: ಕನ್ನಡ-ತುಳು ಸಾಹಿತ್ಯ ವೇದಿಕೆ ಉಡುಪಿ ಜಿಲ್ಲೆ ವಾಟ್ಸ್ ಆ್ಯಪ್ ಬಳಗದ ಸಾಹಿತ್ಯ ಸಂಪದ ಕಾರ್ಯಕ್ರಮ ಕನ್ನಡ – ತುಳು ಸಾಹಿತ್ಯ ವೇದಿಕೆ ವಾಟ್ಸ್ ಆ್ಯಪ್ ಬಳಗ ಆಯೋಜಿಸಿದ್ದ ಮೊದಲ ಆಫ್‌ಲೈನ್ ಕಾರ್ಯಕ್ರಮವಾದ ‘ಸಾಹಿತ್ಯ ಸಂಪದ’ ಹಂಗಾರಕಟ್ಟೆ ಗುಂಡ್ಮಿಯ ಯಕ್ಷಗಾನ ಕಲಾ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗೇರಿ ಶೇಖರ ದೇವಾಡಿಗ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕ.ಸಾ.ಪ ಬ್ರಹ್ಮಾವರ ತಾಲೂಕು ಘಟಕದ ಅಧ್ಯಕ್ಷರಾದ ರಾಮಚಂದ್ರ ಐತಾಳ್ ಗುಂಡ್ಮಿ, ಯಕ್ಷಗಾನ ಕಲಾ ಕೇಂದ್ರದ ಕಾರ್ಯದರ್ಶಿಗಳಾದ ರಾಜಶೇಖರ ಹೆಬ್ಬಾರ್ ಮತ್ತು ಸಹೋದರ ಬಳಗ ಹೊಂಗಿರಣ ವೇದಿಕೆಯ ನಿರ್ವಾಹಕರಾದ ಮಧುಕೇಶವ ಭಾಗ್ವತ್ ಉಪಸ್ಥಿತರಿದ್ದರು. ‘ಕಾವ್ಯ ಮತ್ತು ಕವನ ಕಟ್ಟುವ ಕಲೆ’ ಈ ವಿಚಾರವಾಗಿ ಉಪೇಂದ್ರ ಸೋಮಯಾಜಿ ಅವರಿಂದ ಉಪನ್ಯಾಸ ನಡೆಯಿತು. ಚೇಂಪಿ ದಿನೇಶ್ ಆಚಾರ್ಯ ಇವರು ಸಭಾ ಕಾರ್ಯಕ್ರಮ ನಿರೂಪಿಸಿದರು.
ಎಂಟು ಪುಸ್ತಕ, ಧ್ವನಿಸುರುಳಿ ಬಿಡುಗಡೆ: ಸುಮನಾ ಹೇರ್ಳೆಯವರ ನೀಲಾಂಬರ (ಭಾವ ಗೀತೆ ಸಂಕಲನ), ಫಕೀರಪ್ಪ ತಾಳಗುಂದ ಅವರ ಮುಕ್ಕಣ್ಣನ ತ್ರಿಪದಿಗಳು, ಮತ್ತು ಶೋಭಾ ಹರಿಪ್ರಸಾದ್ ಅವರ ಭಾವ ಕಸ್ತೂರಿ (ಭಾವ ಗೀತೆ ಸಂಕಲನ), ಬಿಂಕದ ಸಿಂಗಾರಿ (ಗಝಲ್ ಸಂಕಲನ), ಭಾಮಿ ಪುಟ್ಟಿ(ಭಾಮಿನಿಯಲ್ಲಿ ಕಥನ ಕಾವ್ಯ), ಸುಬ್ಬಕ್ಕನ ವಚನಗಳು, ಅಂತರಾಳ (ಕಾವ್ಯ ಸಂಕಲನ) ಮತ್ತು ಬೇವು ಬೆಲ್ಲ ಕಥಾ ಸಂಕಲನ) – ಲೋಕಾರ್ಪಣೆಗೊಂಡಿರುವ ಎಂಟು ಕೃತಿಗಳು. ಡಾ. ಫಕೀರಪ್ಪ ತಾಳಗುಂದ ಅವರ ಭಾವ ಗೀತೆಯ ಅಡಕ ಮುದ್ರಿಕೆಯನ್ನು ಕೂಡ ಈ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ವೇದಿಕೆಯ ಸದಸ್ಯೆ ಸುಮಿತಾ ಪ್ರಶಾಂತ್ ಹಾಡಿಗೆ ದನಿಯಾದವರು. ಪದ್ಮನಾಭ ಪೂಜಾರಿ ನೇರಂಬೋಳು ಇವರು ಪುಸ್ತಕಗಳ ಮುಖ ಪುಟ ವಿನ್ಯಾಸ ಮಾಡಿರುವರಲ್ಲದೇ, ಧ್ವನಿ ಸುರುಳಿಯ ಅಡಕ ಮುದ್ರಿಕೆಯನ್ನು ತಯಾರು ಮಾಡುವಲ್ಲಿ ಸಹಕರಿಸಿದರು. ಗೀತಾ ದೇವಿ ಅಡಿಗ, ಮಂಜುಳಾ ತೆಕ್ಕಟ್ಟೆ ಮತ್ತು ಅರುಣಾ ಶ್ರೀನಿವಾಸ್ ಇವರು ವಿಮರ್ಶಾತ್ಮಕವಾಗಿ ಪುಸ್ತಕಗಳ ಅವಲೋಕನಗೈದರು.
ಸಹೋದರ ವೇದಿಕೆ ಹೊಂಗಿರಣ ಸಾಹಿತ್ಯ ಬಳಗದ ಸದಸ್ಯರು ಆಯ್ದ ಮೂವರು ಸದಸ್ಯರಾದ ಶೋಭಾ ಹರಿಪ್ರಸಾದ್, ಸುಮನಾ ಹೇರ್ಳೆ ಮತ್ತು ವಾಸಂತಿ ಅಂಬಲಪಾಡಿ ಇವರನ್ನು ಸನ್ಮಾನಿಸಲಾಯಿತು. ವೇದಿಕೆಯ ಸದಸ್ಯರ ಕವಿತೆಗಳ ಗಾಯನ, ಕಥೆ, ಕವನ ಮತ್ತು ಗಝಲ್ ಗಳ ವಾಚನ ನಡೆಯಿತು. ಸುಮಂಗಲಾ ಭಾರದ್ವಾಜ್ ಮತ್ತು ಸುಬ್ರಹ್ಮಣ್ಯ ಪ್ರಸಾದ ಮುದ್ರಾಡಿ ಇವರ ಯಕ್ಷಗಾನ ಶೈಲಿಯ ಗಾಯನ ನಡೆಯಿತು. ವತ್ಸಲಾ ಶಾಸ್ತ್ರಿ ಪ್ರಾರ್ಥಿಸಿದರು, ರಾಮ ದೇವಾಡಿಗ ಸ್ವಾಗತಿಸಿದರು. ಚರಣ್ ಕುಮಾರ್ ಬಗ್ವಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಶ್ರೀ ಐತಾಳ್ ವಂದಿಸಿದರು.