ಕೋಟ: ಸಂಘಟಿತ ಶ್ರಮಕ್ಕೆ ಫಲ ಸಾಧ್ಯ. ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಸೌಲಭ್ಯವನ್ನು ತಲುಪಿಸುವ ವ್ಯವಸ್ಥೆ ಬಗ್ಗೆ ಸದಸ್ಯರು ಶ್ರಮ ವಹಿಸಬೇಕು. ತರಬೇತಿ ಕಾರ್ಯಾಗಾರಗಳು ಸದಸ್ಯರ ಕಾರ್ಯವೈಖರಿ ಇನ್ನಷ್ಟೂ
ಬಲಗೊಳಿಸುವಲ್ಲಿ ಸಹಕಾರಿ ಎಂದು ಡಾ. ಶಿವರಾಮ ಕಾರಂತ ಪ್ರತಿಷ್ಠಾನದ ಟ್ರಸ್ಟಿ ಎಚ್ ಪ್ರಮೋದ್ ಹಂದೆ ಹೇಳಿದರು.
ಅವರು ಡಾ. ಶಿವರಾಮ ಕಾರಂತ ಪ್ರತಿಷ್ಠಾನ(ರಿ) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ನಲ್ಲಿ ನಡೆದ ಡಾ. ಶಿವರಾಮ ಕಾರಂತರ ಜನ್ಮದಿನೋತ್ಸವದ ಅಂಗವಾಗಿ ಸುಂದರವಾಗಿ ಮಾತನಾಡುವ ಸಭಾ ನಿರ್ವಹಣೆ ಮಾಡುವ ಉಚಿತ ತರಬೇತಿ ಕಾರ್ಯಾಗಾರ ‘ಪದಗಳೇ ಬಂಗಾರ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಷ್ಟ್ರೀಯ ತರಬೇತುದಾರ ಮನೋಜ್ ಕಡಬ ಮಾತನಾಡಿ, ನಾವು ಆಡುವ ಮಾತುಗಳು ನಮ್ಮ ವ್ಯಕ್ತಿತ್ವದ ಕೈಗನ್ನಡಿಯಾಗಿರುತ್ತದೆ. ಶಬ್ದಗಳ ಬಳಕೆಯಲ್ಲಿ ಹತೋಟಿ ಆಗತ್ಯವಾಗಿದ್ದು ಪದಗಳೇ ಬಂಗಾರ ಎಂದರು.
ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕೋಟ ಗ್ರಾಮ ಪಂಚಾಯತ್ ಅಧ್ಯಕ್ಷ ಅಜಿತ್ ದೇವಾಡಿಗ, ಕಾರಂತ ಪ್ರತಿಷ್ಠಾನದ ಟ್ರಸ್ಟಿ ಸುಶೀಲಾ ಸೋಮಶೇಖರ್, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಾಸು ಪೂಜಾರಿ, ಶಿಕ್ಷಕ ತೀಶ್ ವಡ್ಡರ್ಸೆ ಉಪಸ್ಥಿತರಿದ್ದರು. ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಪಿ.ಡಿ.ಓ ಜಯರಾಮ್ ಶೆಟ್ಟಿ ವಂದಿಸಿದರು.