ಉಡುಪಿ: ಕೌಶಲ್ಯ ಶಿಕ್ಷಣಕ್ಕೆ ಪ್ರಸಿದ್ದಿ ಪಡೆದಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉಡುಪಿಯ ಉನ್ನತಿ ಕೆರಿಯರ್ ಅಕಾಡೆಮಿಯು ಕಳೆದ 2 ತಿಂಗಳಲ್ಲಿ ಉಡುಪಿ ಜಿಲ್ಲೆಯ ಆಯ್ದ 60 ಅಭ್ಯರ್ಥಿಗಳಿಗೆ ಆಲ್ ಕಾರ್ಗೋ-ಸಂಚಲನ ಸಂಸ್ಥೆಗಳ ಸಿಎಸ್ಆರ್ ಯೋಜನೆಯಡಿ ಬ್ಯಾಂಕಿಂಗ್ ಮತ್ತು ಫೈನಾನ್ಶಿಯಲ್ ಕ್ಷೇತ್ರದ ಪ್ರಮುಖ ವಿಷಯಗಳಾದ ಕೆವೈಸಿ-ಎಎಂಎಲ್, ಕಸ್ಟಮರ್ ಸರ್ವೀಸ್, ಡಿಜಿಟಲ್ ಬ್ಯಾಂಕಿಂಗ್ ನಲ್ಲಿ ನುರಿತ ತಜ್ಞರಿಂದ ಉಚಿತ ತರಬೇತಿ ನೀಡಿದೆ.
ತರಬೇತಿ ಪಡೆದ ಅಭ್ಯರ್ಥಿಗಳು ತಾವು ಕಲಿತ ವಿಷಯದ ಮೇಲೆ ತಮ್ಮ ಪ್ರಾಜೆಕ್ಟ್ ಗಳನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ, ನಮ್ಮ ಸಂಸ್ಥೆಯು ಯುವಕ-ಯುವತಿಯರನ್ನು ವಿವಿಧ ಕ್ಷೇತ್ರಗಳಲ್ಲಿ ಉದ್ಯೋಗಿಗಳಾಗಿ ಪರಿವರ್ತಿಸಲು ಉತ್ತಮ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಿ ಅವರಲ್ಲಿ ಆತ್ಮವಿಶ್ವಾಸ ಹಾಗೂ ದೃಢತೆಯನ್ನು ತರುವ ಪ್ರಯತ್ನ ಮಾಡುತ್ತಿದೆ.
ಈಗಾಗಲೇ 3000ಕ್ಕೂ ಅಧಿಕ ಅಭ್ಯರ್ಥಿಗಳು ನಮ್ಮ ತರಬೇತಿಗಳ ಪ್ರಯೋಜನ ಪಡೆದಿದ್ದು, ಇದೀಗ ಈ ಯೋಜನೆಯನ್ನು ಹೆಚ್ಚಿನ ವಿದ್ಯಾರ್ಥಿಗಳಿಗೆ ತಲುಪಲು ಕಾರ್ಪೊರೇಟ್ ಸೋಶಿಯಲ್ ರೆಸ್ಪಾಂಸಿಬಿಲಿಟಿ (ಸಿಎಸ್ಆರ್) ಸಹಯೋಗದ ಮೂಲಕ ಪ್ರಯತ್ನಿಸುತ್ತಿದ್ದೇವೆ. ಇದು ನಮ್ಮ ಜಿಲ್ಲೆಯ ಹಾಗೂ ಇತರ ಅಭ್ಯರ್ಥಿಗಳಿಗೆ ಅತ್ಯಂತ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದ ಹೆಚ್.ಡಿ.ಎಫ್.ಸಿ ಉಡುಪಿ ಮುಖ್ಯ ಶಾಖೆಯ ಮುಖ್ಯಸ್ಥ ಹಾಗೂ ಅಸಿಸ್ಟೆಂಟ್ ವೈಸ್ ಪ್ರೆಸಿಡೆಂಟ್ ಪೌಲ್ ಫ್ರಾನ್ಸಿಸ್ ಸಂಸ್ಥೆಯ ತರಬೇತಿಯ ಗುಣಮಟ್ಟತೆ ಹಾಗೂ ವಿದ್ಯಾರ್ಥಿಗಳ ಕೌಶಲ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಸ್ಥೆಯ ನಿರ್ದೇಶಕಿ ಪೌರ್ಣಮಿ ಪ್ರೇಮ್ ಶೆಟ್ಟಿ, ಆರತಿ, ರಾಜೇಶ್, ಯೋಗಿತ ಉಪಸ್ಥಿತರಿದ್ದರು. ಶ್ವೇತ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.