ಉಡುಪಿ: ಮಣಿಪಾಲ ಟೌನ್ ರೋಟರಿಯ ಮಾಜಿ ಅಧ್ಯಕ್ಷರಾದ ಗಣೇಶ್ ನಾಯಕ್ ಮತ್ತು ಶೈಲಾ ಜಿ. ನಾಯಕ್ ಅವರಿಂದ ಶಾಲಾ ವಾಹನಕ್ಕಾಗಿ ಕೊಡಲ್ಪಟ್ಟ ಮೊತ್ತ ರೂ. 23 ಲಕ್ಷವನ್ನು ಪಟ್ಲ ಯು.ಎಸ್.ನಾಯಕ್ ಪ್ರೌಢಶಾಲೆಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರೋಟರಿ ಅಧ್ಯಕ್ಷ ನಿತ್ಯಾನಂದ ನಾಯಕ್, ಕನ್ನಡ ಮಾಧ್ಯಮ ಶಾಲೆಗಳನ್ನು ಉಳಿಸಿ, ಆಧುನಿಕ ಸವಲತ್ತುಗಳಿಂದ ಮಕ್ಕಳಿಗೆ ಶಿಕ್ಷಣದಲ್ಲಿ ಕೊರತೆಯಾಗದಂತೆ, ಸ್ಥಳೀಯ ಮತ್ತು ಕನ್ನಡಾಭಿಮಾನಿಗಳ ಸಹಕಾರದಿಂದ, ಶುಲ್ಕರಹಿತ, ಮೌಲ್ಯಯುತ ಶಿಕ್ಷಣ ಕೊಡುತ್ತಿರುವ ಪಟ್ಲ ರೂರಲ್ ಎಜುಕೇಶನ್ ಸೊಸೈಟಿಯ ಯುಎಸ್ ನಾಯಕ್ ಪ್ರೌಢಶಾಲೆಗೆ ನಗರಗಳಿಂದಲೂ ಮಕ್ಕಳ ಸೇರ್ಪಡೆ ಆಗುತ್ತಿರುವುದು ಸಂತೋಷದಾಯಕ ವಿಚಾರ.
ತಾನು ಹುಟ್ಟಿ ಬೆಳೆದು ಕಲಿತ ಊರಿನ ಶಾಲೆಗೆ ಅಗತ್ಯವಾಗಿ ಬೇಕಾಗಿದ್ದ ಬಸ್ಸಿನ ವ್ಯವಸ್ಥೆಗೆ ಗಣೇಶ್ ನಾಯಕ್ ಅವರ ಕೊಡುಗೆ ಪ್ರೇರಣಾತ್ಮಕವಾಗಿದೆ. ಶಾಲಾ ಪುನರ್ನಿರ್ಮಾಣ ಮತ್ತು ಆಧುನೀಕರಣ ಯೋಜನೆ ವೇಗವಾಗಿ ನಡೆಯುತ್ತಿದೆ. ಸುಸಜ್ಜಿತ ವಿದ್ಯಾರ್ಥಿನಿಲಯ ನಿರ್ಮಾಣವಾಗಿದೆ. ಬಾಲನಿಕೇತನ, ಗುರುಗೃಹ, ನಿರ್ಮಾಣ ಕಾರ್ಯ ಮುಕ್ತಾಯ ಹಂತದಲ್ಲಿದೆ ಎಂದು ಹೇಳಿದರು.
ಟ್ರಸ್ಟ್ ಅಧ್ಯಕ್ಷ ಡಾ. ಶೇಷಪ್ಪ ರೈ, ಶ್ರೀಧರ್ ಡಿ, ಶಾಲಾ ಮುಖ್ಯೋಪಾಧ್ಯಾಯ ಶ್ರೀಕಾಂತ ಪ್ರಭು, ರೂರಲ್ ಎಜುಕೇಶನ್ ಸೊಸೈಟಿಯ ಪದಾಧಿಕಾರಿಗಳಾದ ಪ್ರಕಾಶ ವಿ. ನಾಯಕ್ ಬೆಲ್ಪತ್ರೆ, ಶ್ರೀಕಾಂತ ಕಾಮತ್ ಮುಂತಾದವರು ಉಪಸ್ಥಿತರಿದ್ದರು.