ಉಡುಪಿ: ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜುಕೇಶನ್ ಆಂಡ್ ರಿಸರ್ಚ್ (ಆರ್ಡರ್) ಸಂಸ್ಥೆಯ ವತಿಯಿಂದ ಬೆಳ್ಕಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಲೇಖನ ಸಾಮಗ್ರಿಗಳನ್ನು ವಿತರಿಸುವ ಕಾರ್ಯಕ್ರಮ ಇಂದು ಶಾಲೆಯಲ್ಲಿ ನಡೆಯಿತು.
ಮುಖ್ಯ ಶಿಕ್ಷಕಿ ಸುಲೇಖಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶೈಕ್ಷಣಿಕ ಸಂಸ್ಥೆಗಳ ಜೊತೆಗೆ ಸರಕಾರೇತರ ಸಂಸ್ಥೆಗಳು ಸಹಭಾಗಿತ್ವ ಸಾಧಿಸಿ ಮಕ್ಕಳ ಸ್ನೇಹಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಸರಕಾರಿ ಶಾಲೆಗಳ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಣ ಸಂಪನ್ಮೂಲ ಕೇಂದ್ರ ಉಡುಪಿ ಜೊತೆ ಕಾರ್ಯದರ್ಶಿ ವಾಸು ಆಚಾರ್ ಮಾತನಾಡುತ್ತಾ, ಕಲಿಕೆಗೆ ಅಂತ್ಯವಿಲ್ಲ. ಸದಾ ಹೊಸ ವಿಚಾರಗಳ ಬಗ್ಗೆ ಯೋಚನೆ ಮಾಡಿದರೆ ಆರೋಗ್ಯಕರ ಮನಸ್ಥಿತಿ ಹಾಗೂ ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣ ಸಾಧ್ಯ. ವಿದ್ಯಾರ್ಥಿಗಳು ತಮ್ಮ ಆರೋಗ್ಯದ ಬಗ್ಗೆಯೂ ಗರಿಷ್ಠ ಆದ್ಯತೆ ನೀಡಿ ಯೋಗಾಭ್ಯಾಸಕ್ಕೆ ಒತ್ತು ನೀಡಬೇಕು ಎಂದು ಕರೆ ನೀಡಿದರು.
ಪಡಿ ಸಂಸ್ಥೆಯ ವತಿಯಿಂದ ಕೊರೊನಾ ಅರಿವು ಮೂಡಿಸುವ ಪುಸ್ತಕಗಳನ್ನು ವಿತರಿಸಲಾಯಿತು. ಪಡಿ ಸಂಸ್ಥೆಯಲ್ಲಿ ಕ್ಷೇತ್ರಕಾರ್ಯ ನಡೆಸುವ ಸಮಾಜಕಾರ್ಯ ವಿದ್ಯಾರ್ಥಿಗಳು ಕೋವಿಡ್ ಜಾಗೃತಿ ನಾಟಕ ಪ್ರದರ್ಶಿಸಿದರು.
ಆರ್ಡರ್ ಸಂಸ್ಥೆಯ ಸದಸ್ಯ ಗಣೇಶ್ ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆರ್ಡರ್ ಸಂಸ್ಥೆಯ ಸದಸ್ಯ ವಿವೇಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.