ಉಡುಪಿ: ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹೊಸಪ್ರತಿಭೆಗಳು ಹೊರಹೊಮ್ಮಲು ಸಾದ್ಯವಿದ್ದು, ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೆಳಿದರು.
ಅವರು ನಗರದ ಚಂದು ಮೈದಾನದಲ್ಲಿ ಉಡುಪಿ ಗೃಹರಕ್ಷಕ ದಳದ ವತಿಯಿಂದ ನಡೆದ ಪಶ್ಚಿಮ ವಲಯಮಟ್ಟದ ವೃತ್ತಿಪರ ಕ್ರೀಡಾಕೂಟ 2021 ಉದ್ಘಾಟಿಸಿ ಮಾತನಾಡಿದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಹೆಚ್ಚಿನ ದೈಹಿಕ ಚಟುವಟಿಕೆಗಳು ಆಗಲಿದ್ದು, ಇದು ಆರೋಗ್ಯದ ದೃಷ್ಠಿಯಿಂದ ಅತ್ಯಂತ ಉತ್ತಮವಾದುದು. ಕೋವಿಡ್ ನಿಂದ ರಕ್ಷಿಸಿಕೊಳ್ಳಲು ಉತ್ತಮ ಆರೋಗ್ಯ ಹೊಂದುವುದು ಪ್ರತಿಯೊಬ್ಬರಿಗೂ ಅಗತ್ಯವಾಗಿದ್ದು, ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ ಎಂದು ಕೂರ್ಮಾರಾವ್ ಎಂ ಹೇಳಿದರು.
ಕಾರ್ಯಕ್ರಮದಲ್ಲಿ ಎಎಸ್ಪಿ ಕುಮಾರಚಂದ್ರ, ಕೆಎಂಸಿ ಡೀನ್ ಡಾ. ಶರತ್ ಕೆ ರಾವ್, ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಉಡುಪಿಯ ಅಧ್ಯಕ್ಷ ಎಂ.ಗೋಪಾಲ ಭಟ್ ಮತ್ತಿತರರು ಉಪಸ್ಥಿತರಿದ್ದರು.
ಗೃಹರಕ್ಷಕ ಸಿಬ್ಬಂದಿಯಿಂದದ ಆಕರ್ಷಕ ಪೆರೇಡ್ ನಡೆಯಿತು. ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಕೆ.ಪ್ರಶಾಂತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಸಮಾದೇಷ್ಟ ರಮೇಶ್ ಪ್ರಮಾಣವಚನ ಬೋಧಿಸಿದರು. ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿ, ಶ್ಯಾಮಲಾ ವಂದಿಸಿದರು. ಸಾಯಿನಾಥ್ ಉದ್ಯಾವರ ಮತ್ತು ಲಕ್ಷ್ಮೀನಾರಾಯಣ ರಾವ್ ನಿರೂಪಿಸಿದರು.
ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಗೃಹರಕ್ಷಕದಳ ಸಿಬ್ಬಂದಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು.