ಉಡುಪಿ: ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಕರಾವಳಿ ಕರ್ನಾಟಕದ ಭಕ್ತರಿಗೆ ಚಿರಪರಿಚಿತ ಮತ್ತು ಎಲ್ಲಾ ಧರ್ಮದ ಜನರು ಭೇಟಿ ನೀಡುವ ಸ್ಥಳವಾಗಿದೆ. ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿಯ ಬಲ ಭಾಗದಲ್ಲಿರುವ ಚರ್ಚ್ ರಾಷ್ಟ್ರೀಯ ಹೆದ್ದಾರಿ 66 (ಕರಾವಳಿ ಬೈ-ಪಾಸ್) ರಿ೦ದ ಕೇವಲ 3 ಕಿಮೀ ದೂರದಲ್ಲಿದೆ.

ಅರಬ್ಬಿ ಸಮುದ್ರಕ್ಕೆ ಸಮೀಪದಲ್ಲಿರುವ ಈ ಚರ್ಚ್‌ನನ್ನು ‘ಸ್ಟೆಲ್ಲಾ ಮಾರಿಸ್’ ಅಂದರೆ ‘ಸಮುದ್ರದ ತಾರೆ’ ಎಂದು ಕರೆಯಯುತ್ತಾರೆ. ಮೊದಲು, ಕಲ್ಮಾಡಿಯ ಜನರು ತಮ್ಮ ಆಧ್ಯಾತ್ಮಿಕ ಅಗತ್ಯತೆಗಳಿಗಾಗಿ ತೊಟ್ಟಂ ಅಥವಾ ಉಡುಪಿಯ ಚರ್ಚಿಗೆ ಭೇಟಿ ನೀಡಬೇಕಾಗಿತ್ತು.
ಹೀಗಾಗಿ ಕಲ್ಮಾಡಿಯ ಜನರ ಧಾರ್ಮಿಕ ಅಗತ್ಯತೆಗಳಿಗಾಗಿ ಕಲ್ಮಾಡಿಯಲ್ಲಿಯೇ ಒಂದು ಪುಟ್ಟ ಪ್ರಾರ್ಥನಾ ಮಂದಿರದ ಸ್ಥಾಪನೆಯ ಅಗತ್ಯತೆ ಕಂಡು ಬಂದಿತು. ಪ್ರಾರ್ಥನ ಮಂದಿರದ ಅಗತ್ಯತೆಯನ್ನು ಅರಿತು ಕಲ್ಮಾಡಿಯವರೇ ಆದ ಧರ್ಮಗುರು ಚಾರ್ಲ್ಸ್ ಡಿಸೋಜಾ ರವರು ಊರ ಜನರ ಸಹಕಾರದಿಂದ ಕಲ್ಮಾಡಿಯಲ್ಲಿ ಮೊತ್ತ ಮೊದಲ ದೇವಾಲಯ ನಿರ್ಮಾಣವಾಯಿತು. ಅಂದಿನ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಆಗಿದ್ದ ಅತೀ ವಂದನೀಯ ಡಾಕ್ಟರ್ ಬಾಸಿಲ್ ಡಿʼಸೋಜಾ ರವರು 1972 ರ ಫೆಬ್ರವರಿ 5 ರಂದು ಈ ನೂತನ ಚರ್ಚಿನ ಆಶೀರ್ವಚನ ಮತ್ತು ಲೋಕಾರ್ಪಣೆಯನ್ನು ಮಾಡಿದರು.


1987 ರಲ್ಲಿ ಧರ್ಮಗುರುಗಳಾದ ಡೆನಿಸ್ ಕ್ಯಾಸ್ತಲಿನೋ ರವರು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನ ಪ್ರಥಮ ಧರ್ಮಗುರುವಾಗಿ ನೇಮಕಗೊಂಡು ಅಧಿಕಾರ ವಹಿಸಿಕೊಂಡರು. 1991 ರಲ್ಲಿ ಮಂಗಳೂರಿನ ಬಿಷಪ್ ಅವರು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್ ಅನ್ನು ಸ್ವತಂತ್ರ ದೇವಾಲಯ ಎಂದು ಘೋಷಿಸಿದರು.
ವ೦ದನೀಯ ಡೆನಿಸ್ ಕ್ಯಾಸ್ತಲಿನೋ ಅವರ ನಂತರ ಬಂದ ವ೦ದನೀಯ ರಾಬರ್ಟ್ ಪಿಂಟೋ ಕೂಡ ಚರ್ಚನ್ನು ಅಭಿವೃದ್ಧಿಪಡಿಸಲು ಶ್ರಮಿಸಿದರು. ಅವರ ನಂತರ, ವ೦ದನೀಯ ಐವನ್ ಡಿ’ಮೆಲ್ಲೊ ಅವರು ಅಧಿಕಾರ ವಹಿಸಿಕೊಂಡರು ಮತ್ತು ಅವರ ಅಧಿಕಾರಾವಧಿಯಲ್ಲಿ ಚರ್ಚಗೆ ಹೊಂದಿಕೊಂಡಿರುವ ಜಮೀನನ್ನು ಖರೀದಿಸಿದರು.
ತದನ೦ತರ ಕೆಲವು ವರ್ಷಗಳಿಗೆ ಚರ್ಚು ಜೆಸ್ವಿತ್ ಸಭೆಯ ಅಧಿಕಾರದಲ್ಲಿತ್ತು. ಅನೇಕ ಅಭಿವೃದ್ಧಿ ಕಾರ್ಯಗಳೊಂದಿಗೆ ಜೆಸ್ವಿತ್‌ಸಭೆಯ ಧರ್ಮಗುರುಗಳು ಚರ್ಚ್ ಅನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು. ಕೆಲವು ಅಭಿವೃದ್ಧಿ ಕಾರ್ಯಗಳೆ೦ದರೆ ಅತೀ ಅಗತ್ಯವಾದ ಸ್ಮಶಾನದ ನಿರ್ಮಾಣ, ವೆಲಂಕಣಿ ಮಾತೆಗಾಗಿ ಗ್ರೊಟ್ಟೊ ಇತ್ಯಾದಿ. ವ೦ದನೀಯ ರಿಚರ್ಡ್ ಮಸ್ಕರೇನ್ಹಸ್, ವ೦ದನೀಯ ಜೋಸೆಫ್ ಡಿʼಸೋಜಾ, ವ೦ದನೀಯ ಮ್ಯಾಕ್ಸಿಮ್ ಮಿಸ್ಕಿತ್ ಚರ್ಚ್‌ನಲ್ಲಿ ಸೇವೆ ಸಲ್ಲಿಸಿದ ಜೆಸ್ವಿತ್ ಧರ್ಮಗುರುಗಳು.


ಜೂನ್, 2012 ರಲ್ಲಿ, ವ೦ದನೀಯ ಅಲ್ಬನ್ ಡಿʼಸೋಜಾ ಅವರು ಧರ್ಮಗುರುಗಳಾಗಿ ಅಧಿಕಾರ ವಹಿಸಿಕೊಂಡರು. ಅವರು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚ್‌ನ ಹೊಸ ಕಟ್ಟಡವನ್ನು ದೋಣಿಯ ಆಕಾರದಲ್ಲಿ ನಿರ್ಮಿಸಲು ಪ್ರಾರಂಭಿಸಿದರು ಮತ್ತು ದೀಪಸ್ತ೦ಭ ಆಕಾರದಲ್ಲಿ ಗ೦ಟೆ ಗೋಪುರವನ್ನು ಸಹ ನಿರ್ಮಿಸಿದರು.
ಜನವರಿ 6, 2018 ರಂದು ನಡೆದ ಅದ್ಧೂರಿ ಸಮಾರಂಭದಲ್ಲಿ ಉಡುಪಿಯ ಬಿಷಪ್ ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಮಂಗಳೂರು ಬಿಷಪ್ ಅತೀ ವಂದನೀಯ ಡಾ. ಅಲೋಶಿಯಸ್ ಪಾವ್ಲ್ ಡಿಸೋಜಾ, ಶಿವಮೊಗ್ಗದ ಬಿಷಪ್ ಅತೀ ವಂದನೀಯ ಡಾ ಫ್ರಾನ್ಸಿಸ್ ಸೆರಾವೋ, ಗುಲ್ಬರ್ಗದ ಬಿಷಪ್ ಡಾ.ರಾಬರ್ಟ್ ಮಿರಾಂದ ಅವರ ಉಪಸ್ಥಿತಿಯಲ್ಲಿ ವಿಶಿಷ್ಟವಾದ ಚರ್ಚನ್ನು ಉದ್ಘಾಟಿಸಲಾಯಿತು.
ಜುಲೈ 5, 2021 ರಂದು, ವಂದನೀಯ ಆಲ್ಬನ್ ಡಿʼಸೋಜಾ ಅವರು ಅತ್ತೂರಿನ ಸ೦ತ ಲಾರೆನ್ಸ್ ಮೈನರ್ ಬೆಸಿಲಿಕಾಗೆ ರೆಕ್ಟರ್ ಆಗಿ ವರ್ಗಾವಣೆಗೊ೦ಡರು ಮತ್ತು ವ೦ದನೀಯ ಬ್ಯಾಪ್ಟಿಸ್ಟ್ ಮಿನೇಜಸ್ ಅವರು ಕಲ್ಮಾಡಿ ಸ್ಟೆಲ್ಲಾ ಮಾರಿಸ್‌ಚರ್ಚಿನ ನೂತನ ಧರ್ಮಗುರುಗಳಾಗಿ ಮತ್ತು ವ೦ದನೀಯ ರೋಯ್‌ಲೋಬೊ ಅವರು ಸಹಾಯಕ ಧರ್ಮಗುರುಗಳಾಗಿ ಅಧಿಕಾರವಹಿಸಿಕೊ೦ಡರು.
ಸ್ಟೆಲ್ಲಾ ಮಾರಿಸ್ ಚರ್ಚ್ ಕಲ್ಮಾಡಿ ತನ್ನ ಅಸ್ತಿತ್ವದ (1972-2022) ಸುವರ್ಣ ಮಹೋತ್ಸವವನ್ನು ಆಗಸ್ಟ್ 15, 2022 ರಂದು ಆಚರಿಸುತ್ತಿದೆ. ವೆಲ೦ಕಣಿ ಮಾತೆಯ ಪುಣ್ಯಕ್ಷೇತ್ರ, ಕಲ್ಮಾಡಿ (ವೆಲ೦ಕಣಿ ಮಾತೆಯ ಕೇ೦ದ್ರ, ಉಡುಪಿ ಧರ್ಮಪ್ರಾ೦ತ್ಯದ ಅಧಿಕೃತ ಪುಣ್ಯಕ್ಷೇತ್ರವೆ೦ದು ಘೋಷಣೆ)


ಕಲ್ಮಾಡಿಯಲ್ಲಿರುವ ವೆಲ೦ಕಣಿ ಮಾತೆಯ ಕೇಂದ್ರವು ಪ್ರಪಂಚದಾದ್ಯಂತ ಬಹಳ ಪ್ರಸಿದ್ಧವಾಗಿದೆ. ವೆಲಂಕಣಿ ಮಾತೆಯ ಪ್ರತಿಮೆಯನ್ನು ಆಗಸ್ಟ್ 15, 1988 ರಂದು ಉಡುಪಿ ಚರ್ಚ್‌ನಿಂದ ಮೆರವಣಿಗೆಯಲ್ಲಿ ತರಲಾಯಿತು. ಈ ಪ್ರತಿಮೆಯನ್ನು ವ೦ದನೀಯ ವಿಲ್ಸನ್ ಡಿಸೋಜಾ ಅವರು ಕೊಡುಗೆಯಾಗಿ ನೀಡಿದರು ಮತ್ತು ಈ ಪ್ರತಿಮೆಯನ್ನು ತಮಿಳುನಾಡಿನ ವೆಲಂಕಣಿ ಪುಣ್ಯಕ್ಷೇತ್ರದಿಂದ ತರಲಾಯಿತು.
1988 ರ ಆಗಸ್ಟ್ 15 ರಂದು ಕಲ್ಮಾಡಿಯಲ್ಲಿ ಅಂದಿನ ಮಂಗಳೂರಿನ ಬಿಷಪ್ ಅತೀ ವ೦ದನೀಯ ಡಾ. ಬಾಸಿಲ್ ಡಿʼಸೋಜಾ ಅವರು ವೆಲ೦ಕಣಿ ಮಾತೆಯ ಪ್ರತಿಮೆಯನ್ನು ಪ್ರತಿಷ್ಥಾಪಿಸಿದರು. ಪ್ರತಿಷ್ಠಾಪನೆಯ ನಂತರ, ಇಂದಿಗೂ ಕೇಂದ್ರದಲ್ಲಿ ಅನೇಕ ಪವಾಡಗಳು ನಡೆದಿವೆ.
ಕಲ್ಮಾಡಿಯಲ್ಲಿರುವ ವೆಲ೦ಕಣಿ ಮಾತೆಯ ಕೇಂದ್ರವನ್ನು 15 ಆಗಸ್ಟ್ 2022 ರಂದು ಉಡುಪಿ ಧರ್ಮಪ್ರಾಂತ್ಯದ ಪುಣ್ಯಕ್ಷೇತ್ರವೆಂದು ಅಧಿಕೃತವಾಗಿ ಘೋಷಿಸಲಾಗುವುದು. ಈ ಧಾರ್ಮಿಕ ಕಾರ್ಯಕ್ರಮವು 15ನೇ ಆಗಸ್ಟ್ 2022 ರಂದು ಬೆಳಿಗ್ಗೆ 10.00 ಗಂಟೆಗೆ ಕೃತಜ್ಞತಾ ಪೂರ್ವಕವಾಗಿ ದಿವ್ಯ ಬಲಿಪೂಜೆಯ ಮುಖಾ೦ತರ ನಡೆಯಲಿರುವುದು:
ಈ ದಿವ್ಯ ಬಲಿಪೂಜೆಯಲ್ಲಿ, ಅತೀ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ, ಉಡುಪಿ ಬಿಷಪ್, ಅತೀ ವಂದನೀಯ ಡಾ.ಪೀಟರ್ ಪೌಲ್ ಸಲ್ಡಾನ್ಹಾ, ಮಂಗಳೂರು ಬಿಷಪ್, ಅತೀ ವ೦ದನೀಯ ಡಾ. ಅಲೋಶಿಯಸ್ ಪಾವ್ಲ್ ಡಿʼಸೋಜಾ, ಮಂಗಳೂರಿನ ನಿವೃತ್ತ ಬಿಷಪ್, ಅತೀ ವಂದನೀಯ ಡಾ. ಫ್ರಾನ್ಸಿಸ್ ಸೆರಾವೊ, ಶಿವಮೊಗ್ಗ ಬಿಷಪ್, ಅತೀ ವಂದನೀಯ ಡಾ. ರಾಬರ್ಟ್ ಮಿರಾಂಡಾ, ಗುಲ್ಬರ್ಗಾ ಬಿಷಪ್ ಅತೀ ವಂದನೀಯ ಡಾ. ಹೆನ್ರಿ ಡಿʼಸೋಜ, ಬಳ್ಳಾರಿ ಬಿಷಪ್ ಅತೀ ವಂದನೀಯ ಡಾ. ಲಾರೆನ್ಸ್ ಮುಕ್ಕುಯಿ, ಬೆಳ್ತಂಗಡಿ ಬಿಷಪ್ ಅತೀ ವಂದನೀಯ ಡಾ. ಗೀವರ್ಗೀಸ್ ಮಕಾರಿಯೋಸ್ ಕಲಾಯಿಲ್, ಪುತ್ತೂರಿನ ಬಿಷಪ್ ರವರು ಭಾಗವಹಿಸಲಿರುವರು.
ನೊವೆನಾ ಪ್ರಾರ್ಥನೆಗಳು: ಈ ಧಾರ್ಮಿಕ ಕಾರ್ಯಕ್ರಮಗಳಿಗೆ ಪೂರ್ವಭಾವಿಯಾಗಿ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆಗಳು ಆಗಸ್ಟ್ ೬ ರಿಂದ ಆರಂಭಗೊಂಡವು. ಈ ವೇಳೆ ಉಡುಪಿ ಮತ್ತು ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಧರ್ಮಗುರುಗಳು ವಿವಿಧ ಉದ್ದೇಶಗಳಿಗಾಗಿ ಆರಾಧನೆ ಮತ್ತು ಬಲಿಪೂಜೆಯನ್ನು ನಡೆಸಿದರು.
ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ: ವೆಲಂಕಣಿ ಮಾತೆಯ ಮೂರ್ತಿಯ ಮೆರವಣಿಗೆ ಆಗಸ್ಟ್ 14 ರಂದು ಮಧ್ಯಾಹ್ನ 2:30 ಕ್ಕೆ ಆದಿವುಡುಪಿ ಜಂಕ್ಷನ್ ನಿಂದ ಚರ್ಚಿನವರೆಗೆ ನಡೆಯಲಿರುವುದು. ಉಡುಪಿ ಶಾಸಕರಾದ ಕೆ. ರಘುಪತಿ ಭಟ್ ಇವರು ಮೆರವಣಿಗೆಗೆ ಚಾಲನೆ ನೀಡಲಿರುವರು.