ಉಡುಪಿ: ವಿಶ್ವ ಅಂಗದಾನ ದಿನಾಚರಣೆ ಅಂಗವಾಗಿ ರೋಟರಿ ವಲಯ 4ರ ಹತ್ತು ಕ್ಲಬ್ ಗಳಾದ ಪೆರ್ಡೂರು, ಪರ್ಕಳ, ಐಸಿರಿ ಪರ್ಕಳ, ಮಣಿಪಾಲ ಟೌನ್, ಮಣಿಪಾಲ, ಮಣಿಪಾಲ ಹಿಲ್ಸ್, ಉಡುಪಿ, ಉಡುಪಿ ರೋಯಲ್, ಉದ್ಯಾವರ ಮತ್ತು ಕಟಪಾಡಿಯ ಸದಸ್ಯರು ಜೋಡುಕಟ್ಟೆ ಉಡುಪಿಗೆ ಬರಲಿರುವರು.
ಅಲ್ಲಿಂದ ಮಣಿಪಾಲ ಟೈಗರ್ ಸರ್ಕಲ್ ನವರೆಗಿನ ಕಾರು ಮತ್ತು ಬೈಕ್ ಜಾಥಾವನ್ನು ಅಪರ ಜಿಲ್ಲಾಧಿಕಾರಿ ವೀಣಾ, ಎಸ್ಪಿ ವಿಷ್ಣುವರ್ಧನ್, ರೋಟರಿ ಗವರ್ನರ್ ಡಾ. ಜಯಗೌರಿ, ಮಾಹೆಯ ಪ್ರೊ. ಚಾನ್ಸಲರ್ ಡಾ. ಎಚ್.ಎಸ್.ಬಲ್ಲಾಳ, ರೋಟರಿ ಸಹಾಯಕ ಗವರ್ನರ್ ರಾಮಚಂದ್ರ ಉಪಾಧ್ಯಾಯ ಮತ್ತು ರೋಟರಿ ಜಿಲ್ಲಾ ಯೋಜನೆ – ಚರ್ಮ ಮತ್ತು ಅಂಗದಾನದ ಸಭಾಪತಿ ಡಾ. ಶ್ರೀಧರ ಮತ್ತಿತರ ಗಣ್ಯರೊಡನೆ ಚಾಲನೆ ನೀಡಲಿರುವರು.
ವಲಯದ ವಿವಿದ ಕ್ಲಬ್ ಗಳ ಅಧ್ಯಕ್ಷ ಮತ್ತು ಸದಸ್ಯರು, ಮಣಿಪಾಲ ಅಟೋ ಕ್ಲಬ್ ಮತ್ತು ಉಡುಪಿ ಜಾವಾ ಯೆಚ್ಡಿ ಮೋಟಾರ್ ಸೈಕಲ್ ಕ್ಲಬ್ ನ ಸದಸ್ಯರುಗಳು, ಉಡುಪಿ ಮತ್ತು ಮಣಿಪಾಲ ಪೋಲೀಸ್ ಠಾಣೆಯ ಮುಖ್ಯಸ್ಥರು ಮತ್ತು ಸಿಬ್ಬಂದಿಗಳು ಈ ಜಾಥಾದಲ್ಲಿ ಭಾಗವಹಿಸಲಿರುವರು.
ಅಂಗದಾನದ ಅಗತ್ಯತೆ ಮತ್ತು ಮಹತ್ವವನ್ನು ತಿಳಿಯಪಡಿಸುವ ಸಲುವಾಗಿ ಜನಜಾಗೃತಿಗಾಗಿ ಈ ಜಾಥಾವನ್ನು ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಪ್ರಕಟಣೆಯಲ್ಲಿ ತಿಳಿಸಿದೆ.