ಮಂಗಳೂರು: ಕಲ್ಕೂರ ಪ್ರತಿಷ್ಠಾನ ವತಿಯಿಂದ ಪರ್ಯಾಯ ಪೀಠಾರೋಹಣಗೈಯಲಿರುವ ಕೃಷ್ಣಾಪುರದ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರಿಗೆ ಗುರುವಂದನೆ ಹಾಗೂ ಪಟ್ಟದದೇವರ ತುಲಾಭಾರ ಕಾರ್ಯಕ್ರಮ ಕದ್ರಿ ಕಂಬಳ ಮಲ್ಲಿಕಾ ಬಡಾವಣೆಯ ವಾದಿರಾಜ ಮಂಟಪದ ಪೇಜಾವರ ವಿಶ್ವತೀರ್ಥ ವೇದಿಕೆಯಲ್ಲಿ ಶುಕ್ರವಾರ ಜರಗಿತು.
ಬೆಳಿಗ್ಗೆ 4 ಗಂಟೆಗೆ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣದೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಬೆಳಗ್ಗೆ 7 ಗಂಟೆಗೆ ಪಟ್ಟದ ದೇವರಿಗೆ ಪೂಜೆ, ದ್ವಾದಶಿ ಆರಾಧನೆ, ಗುರುವಂದನೆ, ಪಟ್ಟದ ದೇವರ ತುಲಾಭಾರ ಜರಗಿತು.
ಕೃಷ್ಣಾಪುರದ ಮಠಾಧೀಶರು ಆಶೀರ್ವಚನ ನೀಡಿದರು. ಸ್ವಾಮೀಜಿ ಅವರು ಶ್ರೀಕೃಷ್ಣ ದೇವರ ಪೂಜೆ ಉತ್ಸವಾದಿಗಳು, ಕೃಷ್ಣದೇವರ ದರ್ಶನ, ಅನ್ನಸಂತರ್ಪಣೆ ಸಹಿತ ಗುರುಗಳಾದ ಮಧ್ವಾಚಾರ್ಯರು, ವಾದಿರಾಜರು ಹಾಕಿಕೊಟ್ಟ ರೀತಿ, ರಿವಾಜು, ಪರಂಪರೆಯನ್ನು ತನ್ನ ಪರ್ಯಾಯ ಅವಧಿಯಲ್ಲಿ ಯಥಾವತ್ತಾಗಿ ಮುಂದುವರಿಸಿಕೊಂಡು ಹೋಗುತ್ತೇವೆ.
ಕೊರೊನಾ ಹಿನ್ನಲೆಯಲ್ಲಿ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದು ತಮ್ಮ ಅನುಗ್ರಹ ಸಂದೇಶದಲ್ಲಿ ತಿಳಿಸಿದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಸ್ತಾವಿಕವಾಗಿ ಮಾತನಾಡಿ ಗುರುವಂದನೆ ನೆರವೇರಿಸಿದರು.
ಶ್ರೀ ಕ್ಷೇತ್ರ ಶರವು ಶಿಲೆ ಶಿಲೆ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ, ಕುಡುಪು ಕೃಷ್ಣರಾಜ ತಂತ್ರಿ, ಹರಿಕೃಷ್ಣ ಪುನರೂರು, ಕಾರ್ಪೊರೇಟರ್ ಶಕಿಲಾ ಕಾವ, ಕದ್ರಿ ನವನೀತ ಶೆಟ್ಟಿ, ಡಾ. ಸುಬ್ಬರಾವ್ ಮತ್ತಿತರರು ಉಪಸ್ಥಿತರಿದ್ದರು.