ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಕೋಟತಟ್ಟು ಗ್ರಾಮ ಪಂಚಾಯತ್, ಡಾ. ಶಿವರಾಮ ಕಾರಂತ ಟ್ರಸ್ಟ್ ವತಿಯಿಂದ ನಡೆಯುವ ಉಡುಪಿ ಜಿಲ್ಲೆಯ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಚಿನಂಪ-2021 (ಕವಿತನದ ಹೂ ಕಂಪನ) ದ ಸಮ್ಮೇಳನಾಧ್ಯಕ್ಷೆಯಾಗಿ ಅಮಿತಾಂಜಲಿ ಕಿರಣ್ ಅವರು ಆಯ್ಕೆ ಆಗಿದ್ದಾರೆ.
ಪ್ರಸ್ತುತ ವಾಸುದೇವ ಕೃಪಾ ವಿದ್ಯಾ ಮಂದಿರ ಆಂಗ್ಲ ಮಾಧ್ಯಮ ಶಾಲೆ ಬೈಲೂರು ಇಲ್ಲಿ ಮುಖ್ಯೋಪಾಧ್ಯಾಯಿನಿಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಕಸೂತಿ, ಬರವಣಿಗೆ, ಓದು, ರಂಗಭೂಮಿ ಕ್ಷೇತ್ರಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದು, ಸ್ಥಳೀಯ ವಾಹಿನಿಯೊಂದರಲ್ಲಿ 7 ತಿಂಗಳಗಳ ಕಾಲ “ಓದಿನ ರಿಂಗಣ” ಎಂಬ ಕಾರ್ಯಕ್ರಮದಲ್ಲಿ ಪುಸ್ತಕ ಓದುಗರನ್ನು ಕರೆಸಿ ಮಾತನಾಡಿಸಿದ್ದಾರೆ.
ಇವರಿಂದ ಬಯಕೆ-ಕವನ ಸಂಕಲನ, ಬಸಿರು-ಕವನ ಸಂಕಲನ , ಬಸಿರು ಪುಸ್ತಕಗಳನ್ನು ರಚಿಸಿದ್ದಾರೆ. ಇವರು ರಂಗಭೂಮಿ (ರಿ.) ಉಡುಪಿಯ ಸದಸ್ಯೆ.
ಕೋಟದ ಕಾರಂತ ಥೀಮ್ ಪಾರ್ಕ್ನಲ್ಲಿ ಡಿಸೆಂಬರ್ 19 ರಂದು ಸಂಜೆ 5 ರಿಂದ 9 ಗಂಟೆಯವರೆಗೆ ಹೊರಾಂಗಣದ ಸಂಗೀತ ಕಾರಂಜಿಯ ವೀಕ್ಷಣಾ ಗ್ಯಾಲರಿಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ 27 ಕವಿಗಳು ಭಾಗವಹಿಸಲಿದ್ದಾರೆ.
ಅಲ್ಲದೇ ಗೋಪಾಲ ತ್ರಾಸಿ ಅವರ ಲಂಡನ್ ಟು ವ್ಯಾಟಿಕನ್ ಸಿಟಿ ಕೃತಿ ಬಿಡುಗಡೆಗೊಳ್ಳಲಿದೆ.
ಉಡುಪಿ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನೀಲಾವರ ಸುರೇಂದ್ರ ಅಡಿಗ ಅವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಪ್ರತಿಷ್ಠಾನದ ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.