ಕೋಟ: ಡಾ. ಶಿವರಾಮ ಕಾರಂತ ಪ್ರತಿಷ್ಠಾನ (ರಿ.) ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ (ರಿ.) ಉಡುಪಿ, ಕೋಟತಟ್ಟು ಗ್ರಾಮ ಪಂಚಾಯತ್ ವತಿಯಿಂದ ನವೆಂಬರ್ 14 ರಂದು ಕೋಟದ ಡಾ. ಶಿವರಾಮ ಕಾರಂತ ಥೀಮ್ ಪಾರ್ಕ್ ನಲ್ಲಿ ನಡೆಯುವ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ಬಹುಮುಖ ಪ್ರತಿಭೆ ರೋಶನ್ ಗಿಳಿಯಾರ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಸ್ತುತ ವಿವೇಕ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ತರಗತಿಯ ವಿದ್ಯಾರ್ಥಿ ಆಗಿರುವ ರೋಶನ್ ಗಿಳಿಯಾರ್ ಯಕ್ಷಗಾನ, ಸಂಗೀತ, ಚಿತ್ರಕಲೆ, ಏಕಪಾತ್ರಾಭಿನಯ, ಸಿನಿಮಾ ಕ್ಷೇತ್ರ ಹೀಗೆ ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವುದಲ್ಲದೇ, ಸಾಮಾಜಿಕ ಜಾಲತಾಣದಲ್ಲಿ ತನ್ನದೇ ಆದ ಅಭಿಮಾನಿ ಬಳಗವನ್ನು ಕೂಡಾ ಹೊಂದಿದ್ದಾರೆ.
ನವೆಂಬರ್ 14 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆ ತನಕ ಕಾರ್ಯಕ್ರಮ ನಡೆಯಲಿದ್ದು ಮಕ್ಕಳ ಕವಿಗೋಷ್ಠಿ, ಬಹುವಿಧ ಗೋಷ್ಠಿ ಕಥಾ ವಾಚನ, ಸಾಂಸ್ಕೃತಿಕ ಕಾರ್ಯಕ್ರಮ, ಕನ್ನಡ ಗಾನ ನಮನ, ಕೋಶಿಕಾ ಚೇರ್ಕಾಡಿ ತಂಡದವರಿಂದ ಬೇಂದ್ರೆ ವಿರಚಿತ ಸಾಯೋ ಆಟ ನಾಟಕ ಪ್ರದರ್ಶನವಿದೆ ಎಂದು ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ್ ಸಿ ಕುಂದರ್, ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಅಶ್ವಿನಿ ದಿನೇಶ್, ಕಾರಂತ ಥೀಮ್ ಪಾರ್ಕ್ ವಿಶೇಷ ಕರ್ತವ್ಯಾಧಿಕಾರಿ ಪೂರ್ಣಿಮಾ, ಕಾರ್ಯದರ್ಶಿ ನರೇಂದ್ರ ಕುಮಾರ್ ಕೋಟ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.