ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ‘ಮಾತಾಡ್ ಮಾತಾಡ್ ಕನ್ನಡ’ ಎಂಬ ಕಾರ್ಯಕ್ರಮದಡಿಯಲ್ಲಿ ಕನ್ನಡ ಗೀತೆಗಳಾದ ಬಾರಿಸು ಕನ್ನಡ ಡಿಂಡಿಮವ, ಜೋಗದ ಸಿರಿ ಬೆಳಕಿನಲ್ಲಿ ಹಾಗೂ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಇತ್ಯಾದಿ ಹಾಡುಗಳನ್ನು ಸಾಮೂಹಿಕವಾಗಿ ಹಾಡುವ ಕಾರ್ಯಕ್ರಮ ನಡೆಸಲಾಯಿತು.
ಜೊತೆಗೆ ಸ್ಥಳೀಯ ಕೋಟ-ಗ್ರಾಮ ಪಂಚಾಯತ್‌ನಲ್ಲೂ ಸಮೂಹ ಗೀತೆಯನ್ನು ಹಾಡುವುದರ ಮೂಲಕ ಜಾಗೃತಿ ಮೂಡಿಸಲಾಯಿತು. ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಸಮೂಹ ಗಾಯನ ಕಾರ್ಯಕ್ರಮಕ್ಕೆ ಮಾರ್ಗದರ್ಶನ ನೀಡಿದರು. ‘ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ನನ್ನ ಅನಿಸಿಕೆ’ ಕುರಿತಾಗಿ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿ ತೃತೀಯ ಬಿ.ಕಾಂ ನ ಸಿಂಧು, ಸ್ವಸ್ತಿಕ್ ಹಾಗೂ ತೃತೀಯ ಬಿ.ಎ ಯ ಸಂಗೀತ ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಗಳಿಸಿದರು.
ಸ್ಪರ್ಧೆಗಳಿಗೆ ಚಾಲನೆಯಿತ್ತ ಪ್ರಾಂಶುಪಾಲರಾದ ನಿತ್ಯಾನಂದ ವಿ ಗಾಂವಕರ, ಮಾತೃಭಾಷೆ ಕನ್ನಡದ ಕುರಿತಾಗಿ ಅಭಿಮಾನ ಬೆಳೆಸಿಕೊಂಡು ಕೇವಲ ಆಚರಣೆಗೆ ಸೀಮಿತವಾಗಿಸದೆ ದೈನಂದಿನ ಬದುಕಿನಲ್ಲಿ ಕನ್ನಡ ಭಾಷೆಯನ್ನು ಬಳಸಿಕೊಳ್ಳುತ್ತಾ ಕನ್ನಡ ಸಾಹಿತ್ಯದ ಒಳ್ಳೆಯ ಪುಸ್ತಕವನ್ನು ಓದಿ ಕನ್ನಡವನ್ನು ಉಳಿಸಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆಯಿತ್ತರು.
ಕನ್ನಡ ವಿಭಾಗ ಮುಖ್ಯಸ್ಥ ನಾಗರಾಜ ವೈದ್ಯ ಕನ್ನಡ ಭಾಷೆಯ ಶ್ರೇಷ್ಠತೆಯನ್ನು ತಿಳಿಸಿದರೆ, ಇತಿಹಾಸ ವಿಭಾಗ ಮುಖ್ಯಸ್ಥರಾದ ರಾಜಣ್ಣ ಎಂ ಕನ್ನಡ ಭಾಷೆ ಬೆಳೆದು ಬಂದ ಇತಿಹಾಸ ತಿಳಿಸಿದರು. ಕಾಲೇಜಿನ ಗ್ರಂಥಾಲಯದಲ್ಲಿ ಕನ್ನಡ
ಭಾಷೆ-ಸಾಹಿತ್ಯ-ಸಂಸ್ಕೃತಿಗೆ ಸೇರಿದ ಪುಸ್ತಕಗಳ ಪ್ರದರ್ಶನವನ್ನು ಗ್ರಂಥಪಾಲಕರಾದ ಕೃಷ್ಣ ಸಾಸ್ತಾನ ಆಯೋಜಿಸಿದರು.
ಸಹಾಯಕ ಪ್ರಾಧ್ಯಾಪಕರಾದ ಮಂಜುನಾಥ ಆಚಾರಿ, ಪ್ರಶಾಂತ್ ಎನ್ ನೀಲಾವರ, ಮನೋಹರ ಬಿ ಉಪ್ಪುಂದ, ಮುರುಳಿ ಎನ್, ರವಿಪ್ರಸಾದ ಕೆ.ಜಿ, ಕಚೇರಿ ಸಹಾಯಕರಾದ ಸುಜೀಂದ್ರ ಕಾರ್ಯಕ್ರಮ ಆಯೋಜಿಸುವಲ್ಲಿ ಸಹಕರಿಸಿದರು.