ಮಂಗಳೂರು: ಎರಡು ಸಾವಿರ ವರ್ಷಗಳ ಐತಿಹಾಸಿಕ ಪರಂಪರೆ ಹೊಂದಿರುವ ಕರ್ನಾಟಕ ಇಂದು ಬೆಳೆದ ಬಗೆ ಆಶ್ಚರ್ಯಕರವಾದುದು. ಇದರ ಹಿಂದೆ ಕನ್ನಡಿಗರ ಆತ್ಮಶಕ್ತಿ ದುಡಿದಿದೆ. ಇಂತಹ ದುಡಿಮೆ ಇಂದಿಗೂ ಅಗತ್ಯವಿದೆ ಎಂದು ಉಪನ್ಯಾಸಕ ಸತೀಶ ಹೇಳಿದರು. ಅವರು ಡಾ. ಪಿ. ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ಹಲವು ಭಾಷೆಗಳು, ಜೀವನ ಪದ್ಧತಿಗಳು, ಭಾಷೆಯ ಮೂಲಕ ಒಂದಾಗಿ ಕನ್ನಡ ನಾಡು ಉದಯವಾಗಿದೆ. ಭಾಷೆಗಳೊಳಗಿನ ಹೊಂದಾಣಿಕೆಯಿಂದ ನಾಡಿನ ಏಕತೆಯನ್ನು ಕಾಪಾಡಿಕೊಳ್ಳುವ ಜವಬ್ದಾರಿ ನಮಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಮಾತನಾಡುತ್ತಾ, ಕನ್ನಡ ಭಾಷೆ ನಾಶವಾಗುತ್ತಿದೆ ಎನ್ನುವ ಭಯಕ್ಕಿಂತಲೂ ಅದು ಬೆಳೆಯುವ ಸಂದರ್ಭದಲ್ಲಿ ಪಡೆದುಕೊಳ್ಳುತ್ತಿರುವ ರೂಪವೈವಿಧ್ಯದ ಬಗ್ಗೆ ಗಮನಹರಿಸಬೇಕಾಗಿದೆ.
ನಮ್ಮ ಮನೆಯ ಪರಿಸರದಲ್ಲಿ ಕನ್ನಡದ ಪ್ರೀತಿ ಹುಟ್ಟಿಕೊಂಡರೆ ಸಹಜವಾಗಿ ನಾಡು, ಸಂಸ್ಕೃತಿಯ ಬಗೆಗೆ ಮುಂದಿನ ಪೀಳಿಗೆಗೆ ಪ್ರೀತಿ ಹುಟ್ಟಿಕೊಳ್ಳುತ್ತದೆ ಎಂದರು. ವಿದ್ಯಾರ್ಥಿಗಳು ಆಶಯ ಗೀತೆಯನ್ನು ಹಾಡಿದರು. ವಿದ್ಯಾರ್ಥಿ ಪ್ರಜ್ವಲ್ ಪೂಜಾರಿ ಸ್ವರಚಿತ ಕವನವನ್ನು ವಾಚಿಸಿದರು.
ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ರವಿಕುಮಾರ ಎಂ.ಪಿ ಸ್ವಾಗತಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸುಧಾಕರನ್ ಟಿ., ಡಾ. ವಸಂತಿ ಪಿ., ವಿಕಾಸದ ಅಧ್ಯಕ್ಷೆ ಡಾ. ನಾಗವೇಣಿ ಮಂಚಿ, ಡಾ. ಪುರುಷೋತ್ತಮ ಭಟ್, ಡಾ. ಜ್ಯೋತಿಪ್ರಿಯಾ, ಡಾ. ಮಹೇಶ್ ಕೆ.ಬಿ., ಡಾ. ಸುಮನ ಬಿ ಉಪಸ್ಥಿತರಿದ್ದರು. ಡಾ. ಶೇಷಪ್ಪ ಕೆ. ವಂದಿಸಿದರು. ವಿದ್ಯಾರ್ಥಿನಿ ರಮ್ಯ ಆರ್ ಕಾರ್ಯಕ್ರಮ ನಿರೂಪಿಸಿದರು.