ಮಂಗಳೂರು: ಸಾಂಪ್ರದಾಯಿಕ ಯಕ್ಷಗಾನದ ಆರಂಭಿಕ ಶಿಕ್ಷಣದ ಪರಿಪೂರ್ಣ ಜ್ಞಾನ ನೀಡುವ ಕಲೆಯೇ ಹೂವಿನ ಕೋಲು. ಖಾದಿ ವಸ್ತ್ರಧಾರಿಗಳಾಗಿ, ತಲೆಯ ಮೇಲೆ ಗಾಂಧಿ ಟೋಪಿ ಧರಿಸುವುದರೊಂದಿಗೆ ರಾಷ್ಟ್ರಾಭಿಮಾನವನ್ನು ಪ್ರತಿಬಿಂಬಿಸುವ ಎಳೆಯ ಮಕ್ಕಳು ಹೂವಿನಕೋಲು ಎನ್ನುವ ಧ್ವಜಸ್ತಂಭದೊಂದಿಗೆ, ಕೋಲಾಟದ ಹಿನ್ನಲೆಯನ್ನಿರಿಸಿಕೊಂಡು ಸಣ್ಣ ಸಣ್ಣ ಪುರಾಣ ಕಥೆಗಳನ್ನು ಭಾಗವತರೊಂದಿಗೆ ಯಕ್ಷಗಾನದ ಮೂಲಕ ಮನೆ ಮನೆಗಳಿಗೆ ತೆರಳಿ ಪ್ರಸ್ತುತಪಡಿಸುವ ಕ್ರಮ ಅತ್ಯಂತ ಸ್ತುತ್ಯರ್ಹವಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಹೇಳಿದರು.
ಕದ್ರಿ ಕಂಬಳದ ಮಂಜುಪ್ರಾಸಾದದ ವಿಶ್ವೇಶತೀರ್ಥ ವೇದಿಕೆಯಲ್ಲಿ ನಡೆದ ತೆಕ್ಕಟ್ಟೆ ಯಶಸ್ವಿ ಕಲಾವೃಂದ ಕೋಮೆ ತಂಡದಿಂದ ಸಾಂಪ್ರದಾಯಿಕ ಹೂವಿನಕೋಲು ಪ್ರದರ್ಶನಗೊಂಡಿತು. ಮಕ್ಕಳ ತಂಡದ ಗುರುಗಳು ಹಾಗೂ ಭಾಗವತರಾದ ದೇವದಾಸ ರಾವ್ ಕೂಡ್ಲಿ, ಮದ್ದಳೆ ವಾದಕ ಸ್ಕಂದ ಉರಾಳ, ಹಾಗೂ ತಂಡದ ನೇತೃತ್ವ ವಹಿಸಿದ ವೆಂಕಟೇಶ ವೈದ್ಯ ಮೊದಲಾದವರನ್ನು ಶಾಲು ಫಲವಸ್ತುವಿನೊಂದಿಗೆ ಗೌರವಿಸಿ ಕಲ್ಕೂರ ಮಾತನಾಡಿದರು.
ಜನಾರ್ದನ ಹಂದೆ ಸ್ವಾಗತಿಸಿದರು. ಹಿರಿಯ ವಿದ್ವಾಂಸ ಡಾ. ಎಂ. ಪ್ರಭಾಕರ ಜೋಶಿ ಶುಭಾಶಂಸನೆಗೈದರು. ರಾಮಚಂದ್ರ ಭಟ್ ಕದ್ರಿಕಂಬ್ಳ, ಸುಧಾಕರ ರಾವ್ ಪೇಜಾವರ, ವಿನೋದ ಪಿ. ಕಲ್ಕೂರ ಮೊದಲಾದವರು ಉಪಸ್ಥಿತರಿದ್ದರು.