ಮಂಗಳೂರು: ಲಕ್ಷೀ ಮೆಮೋರಿಯಲ್ ಎಜ್ಯುಕೇಶನ್ ಟ್ರಸ್ಟ್ನ (ಎಲ್.ಎಂ.ಇ.ಟಿ) ಅಂಗ ಸಂಸ್ಥೆಯಾದ ಎ. ಜೆ. ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಸಂಸ್ಧೆಯಲ್ಲಿ ಯಕ್ಷಗಾನವನ್ನು ಉತ್ತೇಜಿಸಿ ಮತ್ತಷ್ಟು ಬೆಳೆಸುವ ದೃಷ್ಟಿಯಿಂದ ವಿಶ್ವವಿದ್ಯಾನಿಲಯ ಮಟ್ಟದ ಯಕ್ಷಗಾನ ಸ್ಪರ್ಧೆ-ಯಕ್ಷಕಲೋತ್ಸವವನ್ನು ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಡಾ. ಪ್ರಭಾಕರ ಜೋಶಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಯಕ್ಷಗಾನ ಎಂಬುದು ಕರಾವಳಿಯ ಅದ್ಭುತ ಕಲೆಗಳಲ್ಲಿ ಒಂದಾಗಿದ್ದು, ಅದನ್ನು ನೋಡುವುದೇ ಒಂದು ಸೊಬಗು. ಪುರಾಣದ ಕಥೆಗಳನ್ನು ಎಳೆಎಳೆಯಾಗಿ ತನ್ನದೇ ಭಾಷಾ ಸಾಹಿತ್ಯದಲ್ಲಿ ಬೆಸೆದು ಹಾಡುವ ಪರಿ ಎಂತಹವರನ್ನೂ ಸಹ ತನ್ನೆಡೆಗೆ ಸೆಳೆಯುತ್ತದೆ. ಕಥೆಗಳ ಮೂಲಕವೇ ಸಮಾಜಮುಖಿ ಚಿಂತನೆಗಳನ್ನು ಬಿತ್ತುತ್ತಾ ತಿಳಿವಳಿಕೆಯನ್ನು ಹೆಚ್ಚಿಸುವ ಮಾಧ್ಯಮವಾಗಿ ಇಂದು ದೇಶದೆಲ್ಲೆಡೆ ಪ್ರಚಾರಗೊಂಡು ತನ್ನದೇ ಹಿರಿಮೆಯ ಮೂಲಕ ಕನ್ನಡದ ಜಾನಪದ ಲೋಕದ ಜನಪ್ರಿಯ ಕಲೆ ಎಂಬ ಹೆಗ್ಗಳಿಕೆಯೊಂದಿಗೆ ಮುಂದುವರಿಯುತ್ತದೆ ಎಂದರು.
ಯಕ್ಷಗಾನದಲ್ಲಿಯೂ ನಿರ್ವಹಣಾ ಶಾಸ್ತ್ರಕ್ಕೆ ಮಹತ್ತರವಾದ ಸಂಬಂಧವಿದ್ದು ಯಕ್ಷಗಾನವು ಉತ್ತಮವಾಗಿ ಮೂಡಿಬರಬೇಕೆಂದರೆ ಪ್ರತೀ ಹಂತದಲ್ಲಿಯೂ ನಿರ್ವಹಣಾ ತತ್ವಗಳನ್ನು ಅಳವಡಿಸಿಕೊಳ್ಳಲೇಬೇಕೆಂದು ತಿಳಿಸಿದರು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಮ್ಮ ನಾಡಿನ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಎಲ್ಲರೂ ಕೈಜೋಡಿಸಬೇಕೆಂದು ಕರೆ ನೀಡಿದರು.
ಸಂಸ್ಥೆಯ ಹಳೆಯ ವಿದ್ಯಾರ್ಥಿ ಹಾಗೂ ಪ್ರಸ್ತುತ ಕನ್ನಡವಾಹಿನಿ, ಬೆಂಗಳೂರು ಇಲ್ಲಿ ಮಾರುಕಟ್ಟೆ ನಿರ್ವಹಣಾ ವಿಭಾಗದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಪವನ್ ಕುಮಾರ್ ಇವರು ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ನಿರ್ದೇಶಕರಾದ ಡಾ. ಟಿ. ಜಯಪ್ರಕಾಶ್‌ರಾವ್‌ರವರು, ನಮ್ಮ ಈ ನಾಡಿನ ಕಲೆಯಾದ ಯಕ್ಷಗಾನಕ್ಕೆ ಡಾ. ಪ್ರಭಾಕರ ಜೋಶಿ ಇವರ ಕೊಡುಗೆ ಅಪಾರವಾದದ್ದು ಎಂದರು. ಈ ರೀತಿಯ ಯಕ್ಷಗಾನ ಸ್ಪರ್ಧೆಗಳನ್ನು ಹಮ್ಮಿಕೊಳ್ಳುವ ಮುಖ್ಯವಾದ ಉದ್ದೇಶವೆಂದರೆ ಇಂದಿನ ಯುವ ಜನಾಂಗದವರಲ್ಲಿ ನಮ್ಮ ಕಲೆ ಮತ್ತು ಸಂಸ್ಕೃತಿಯ ಕಡೆಗೆ ಒಲವು ಮೂಡಿಸುವುದು ಹಾಗೂ ಈ ಕಲೆಯನ್ನು ಬೆಳೆಸುವ
ನಿಟ್ಟಿನಲ್ಲಿ ಪ್ರೋತ್ಸಾಹಿಸುವುದಾಗಿದೆ ಎಂದರು.
ಸಂಸ್ಥೆಯ ಪ್ರಾಧ್ಯಾಪಕರಾದ ಆರತಿ ಕೆ. ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಮಾಲತಿ ವೆಂಕಟೇಶ್, ಸಂಸ್ಥೆಯ ಡೀನ್ ಡಾ. ವಿಜಯ ಕುಮಾರ್, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಪ್ರೊ. ಚೇತನ್ ಕುಮಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಪ್ರೊ. ಮಹೇಶ್ ಪಿ.ಜಿ. ಇವರು ಯಕ್ಷಕಲೋತ್ಸವ – ೨೦೨೨ ಯಕ್ಷಗಾನ ಸ್ಪರ್ಧೆಯ ಕುರಿತಾಗಿ ಸಭೆಗೆ ವಿವರಣೆಯನ್ನು ನೀಡಿದರು. ವಿದ್ಯಾರ್ಥಿನಿಯರಾದ ಐಶ್ವರ್ಯ ರೋಸ್ ಮ್ಯಾಥೀವ್ ಮತ್ತು ಮನೀಷಾ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿನಿ ಕೃತಿ ವಿ. ರಾವ್ ವಂದನಾರ್ಪಣೆಗೈದರು.
ಸ್ಪರ್ಧೆಗೆ ಡಾ. ಶ್ರುತಕೀರ್ತಿ ರಾಜ್ ಹಾಗೂ ಪ್ರೊ. ಎಮ್. ಮೋಹನ್ ಕಲ್ಲೂರಾಯ ತೀರ್ಪುಗಾರರಾಗಿ ಆಗಮಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಹಾಗೂ ಕಲಾವಿದರಿಗೆ ಬಹುಮಾನ ವಿತರಣೆ ನಡೆಯಿತು.
ಯಕ್ಷಕಲೋತ್ಸವ-೨೦೨೨ ಯಕ್ಷಗಾನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಆಳ್ವಾಸ್ ಕಾಲೇಜು ಮೂಡಬಿದಿರೆ (ಪ್ರಸಂಗ – ಸುದರ್ಶನ ಗರ್ವಭಂಗ) ಪಡೆದರೆ, ದ್ವಿತೀಯ ಬಹುಮಾನವನ್ನು ಎಸ್.ಡಿ.ಎಮ್. ಕಾನೂನು ಕಾಲೇಜು ಮಂಗಳೂರು (ಪ್ರಸಂಗ – ಶರಣ ಸೇವಾರತ್ನ) ಪಡೆದರು. ಸ್ಪರ್ಧೆಯಲ್ಲಿ ತಂಡ ಬಹುಮಾನದೊಂದಿಗೆ ವೈಯಕ್ತಿಕವಾಗಿ ಉತ್ತಮ ನಿರ್ವಹಣೆ ತೋರಿದ ಅತ್ಯುತ್ತಮ ಪುಂಡುವೇಷಧಾರಿಯಾಗಿ ಆಳ್ವಾಸ್ ಕಾಲೇಜಿನ ಕೃತಿಕ್ ಶೆಟ್ಟಿ, ಕಿರೀಟ ವೇಷಧಾರಿಯಾಗಿ ಗೋವಿಂದದಾಸ ಕಾಲೇಜಿನ ಕಾರ್ತಿಕ್, ಬಣ್ಣದ ವೇಷಧಾರಿಯಾಗಿ ವಿವೇಕಾನಂದ ಕಾಲೇಜಿನ ಶ್ರೀರಾಮ್, ಸ್ತ್ರೀ ವೇಷಧಾರಿಯಾಗಿ ಆಳ್ವಾಸ್ ಕಾಲೇಜಿನ ಈಶ್ವರಿ ಆರ್. ಶೆಟ್ಟಿ ಮತ್ತು ಹಾಸ್ಯ ವೇಷಧಾರಿಯಾಗಿ ಎಸ್.ಡಿ.ಎಮ್. ಲಾ ಕಾಲೇಜಿನ ಸುಮನ್ ರಾಜ್ ಇವರು ಬಹುಮಾನ ಪಡೆದರು.