ಮಂಗಳೂರು: ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಪ್ರಸ್ತುತ ದಿನಗಳಲ್ಲಿ ಈಗಿನ ಶಿಕ್ಷಕರಿಗೆ ಸವಾಲುಗಳೇ ಹೆಚ್ಚಾಗುತ್ತಿದೆ. ಕೋವಿಡ್ ಬಂದ ನಂತರ ತರಗತಿವಾರು ಶಿಕ್ಷಣ ಕಡಿಮೆಯಾಗಿ ಆನ್ ಲೈನ್ ಶಿಕ್ಷಣಕ್ಕೆ ಅವಲಿಂಬಿತರಾಗಿದ್ದಾರೆ.
ಶಿಕ್ಷಣದ ಮಹತ್ವವನ್ನು ಪೋಷಕರು ತಿಳಿಸಬೇಕು. ಮಕ್ಕಳನ್ನು ಕಡ್ಡಾಯವಾಗಿ ಶಾಲೆಗೆ ಕಳುಹಿಸಬೇಕು, ಮಕ್ಕಳಿಗೆ ಸ್ವಲ್ಪ ಸಮಯವಾದರೂ ಮೀಸಲಿಡಬೇಕು. ಮೊಬೈಲ್ ಚಟದಿಂದ ದೂರವಿರಿಸಬೇಕು. ಅಗ ಮಕ್ಕಳು ಗುಣಾತ್ಮಕ ಶಿಕ್ಷಣವನ್ನು ಪಡೆದುಕೊಳ್ಳಲು ಸಾಧ್ಯ, ಮತ್ತು ಆರ್.ಟಿ.ಇ.ಕಾಯ್ದೆಯ ಅನುಷ್ಠಾನ ಪರಿಣಾಮಕಾರಿಯಾಗಲು ಸಾಧ್ಯವಾಗುತ್ತದೆ ಎಂದು ಅಕ್ಷರ ದಾಸೋಹ ದ.ಕ. ಜಿಲ್ಲೆ ಶಿಕ್ಷಣಾಧಿಕಾರಿ ಉಷಾ ಹೇಳಿದರು.
ಅವರು ಪಡಿ ಮಂಗಳೂರು ನೇತೃತ್ವದಲ್ಲಿ ನಡೆದ ಶಿಕ್ಷಣ ಹಕ್ಕು ಕಾಯಿದೆ- 2009ರ ಸಮರ್ಪಕ ಅನುಷ್ಠಾನದ ಕುರಿತು ರಾಜ್ಯ ಮಟ್ಟದ ಸಮಾಲೋಚನೆ ಸಭೆಯಲ್ಲಿ ಮಾತನಾಡಿದರು.
ಪ್ರಸ್ತಾವಿಕವಾಗಿ ಮಾತುಗಳನ್ನಾಡಿದ ಪಡಿ ಸಂಸ್ಥೆಯ ರೆನ್ನಿ ಡಿಸೋಜರವರು, ಸಮಾಜದಲ್ಲಿ ಅನೇಕ ಮಕ್ಕಳು ಶಾಲೆಯಿಂದ ಹೊರಗುಳಿದು ಶಿಕ್ಷಣ ಹಕ್ಕುಗಳಿಂದ ವಂಚಿತರಾಗಿರುತ್ತಾರೆ. ಅದರ ಜೊತೆಗೆ ಕಳೆದ ಕೋವಿಡ್ ಸಂದರ್ಭದಲ್ಲಿ ಮಕ್ಕಳು ತರಗತಿವಾರು ಶಿಕ್ಷಣದಿಂದ ವಂಚಿತರಾಗಿ ಆನ್ ಲೈನ್ ಶಿಕ್ಷಣಕ್ಕೆ ಒಗ್ಗಿಕೊಂಡು ಅದರ ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ.
ಆದ್ದರಿಂದ ಎಲ್ಲಾ ಮಕ್ಕಳು ಕಡ್ಡಾಯವಾಗಿ ತರಗತಿವಾರು ಶಿಕ್ಷಣ ಪಡೆಯುವಂತೆ, ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಬ್ದಾರಿಯಾಗಿರುತ್ತದೆ. ಆದ್ದರಿಂದ ಸಮಾಜದ ಪ್ರತೀ ಮಗುವು ಶಿಕ್ಷಣದ ಹಕ್ಕನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ನಾವೆಲ್ಲರೂ ಶ್ರಮಿಸಬೇಕಾಗಿ ತಿಳಿಸಿದರು.
ರಾಜ್ಯ ಎಸ್.ಡಿ.ಎಂ.ಸಿ ಸಮನ್ವಯ ವೇದಿಕೆಯ ರಾಜ್ಯಧ್ಯಕ್ಷರಾದ ಮೋಯ್ದಿನ್ ಕುಟ್ಟಿ ಮಾತನಾಡುತ್ತಾ, ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ನಿರ್ವಹಿಸುವ ಜವಾಬ್ದಾರಿ ಶಾಲಾ ಎಸ್.ಡಿ.ಎಮ್.ಸಿ. ಹೊಂದಿದ್ದು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಬೇಕಾಗುತ್ತದೆ. ಆದ್ದರಿಂದ ಪ್ರತೀ ಶಾಲೆಯಲ್ಲಿ ಮಕ್ಕಳಿಗೆ ಬೇಕಾದ ಪೂರಕ ವ್ಯವಸ್ಥೆಗಳ ಅಭಿವೃದ್ಧಿಯಾಗಬೇಕು, ಹಾಗೇ ಶಿಕ್ಷಕರ ಜೊತೆಗೆ ಮಕ್ಕಳ ಪೋಷಕರು ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮನವೊಲಿಸಿ ಶಾಲೆಗೆ ಕರೆತರುವಂತಹ ಕೆಲಸಗಳಾಗಬೇಕಾಗಿದೆ ಎಂದರು.
ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷರಾದ ನಂದ ಪಯಾಸ್, ವಿವಿಧ ಜಿಲ್ಲೆಯ ಶಿಕ್ಷಣಾಸಕ್ತರು, ಪಡಿ ಸಂಸ್ಥೆ ಮತ್ತು ಚೈಲ್ಡ್ ಲೈನ್ ಸಂಸ್ಥೆಯ ಸಿಬ್ಬಂದಿಗಳು ಭಾಗವಹಿಸಿದರು. ಪಡಿ ಸಂಸ್ಥೆಯ ಲಲಿತ ಸ್ವಾಗತಿಸಿ, ವಿವೇಕ್ ವಂದಿಸಿದರು. ಸಿದ್ದಾಂತ್ ಪುತ್ತೂರು ನಿರೂಪಿಸಿದರು.