ಮಂಗಳೂರು, ಸೆ.20: ಕರ್ನಾಟಕ ನಾಮಕರಣ ಸುವರ್ಣ ಸಂಭ್ರಮಾಚರಣೆಯ ಪ್ರಯುಕ್ತ ಮಂಗಳೂರಿನಲ್ಲಿ ನಡೆಯಲಿರುವ ಬಹುಸಂಸ್ಕೃತಿ ಉತ್ಸವದ ಅಂಗವಾಗಿ ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ.ಸತೀಶ ಪೈ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ಲಲಿತಕಲಾ ಸಂಘದ ಆಶ್ರಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ಕನ್ನಡ ನಾಡು,ನುಡಿ, ಸಂಸ್ಕೃತಿಗೆ ಸಂಬಂಧಿಸಿದ ಭಾವಗೀತೆಗಳ ಸಮೂಹಗಾನ ಸ್ಪರ್ಧೆ ನಡೆಯಿತು. ಈ ಸ್ಪರ್ಧೆಯಲ್ಲಿ ಜಿಲ್ಲೆಯ 16 ಕಾಲೇಜಿನ ತಂಡಗಳು ಭಾಗವಹಿಸಿದ್ದವು. ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ಪ್ರಾದೇಶಿಕ ಕಛೇರಿಯ ಜಂಟಿ ನಿರ್ದೇಶಕರಾದ ಪ್ರೊ. ರಾಮೇಗೌಡ ಎಂ ಇವರು ಸ್ಪರ್ಧೆಯನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಕೋರಿದರು.
ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ ಅವರು ವಹಿಸಿದ್ದರು. ಐಕ್ಯೂಎಸಿ ಸಂಯೋಜಕರಾದ ದೇವಿ ಪ್ರಸಾದ್ ಹಾಗೂ ಲಲಿತಕಲಾ ಸಂಘದ ಹಾಗೂ ಸ್ಪರ್ಧೆಗಳ ಸಂಯೋಜಕರಾದ ಡಾ. ಕೃಷ್ಣಪ್ರಭ ಉಪಸ್ಥಿತರಿದ್ದರು. ಐಕ್ಯೂಎಸಿ ಸಹ ಸಂಯೋಜಕರಾದ ಡಾ. ಜ್ಯೋತಿಪ್ರಿಯ ಕಾರ್ಯಕ್ರಮ ನಿರ್ವಹಿಸಿದರು. ಜಯಲಕ್ಷ್ಮಿ ಹಾಗೂ ಸಂಧ್ಯಾರಾಣಿ ತೀರ್ಪುಗಾರರಾಗಿ ಸಹಕರಿಸಿದರು. ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ(ಸ್ವಾಯತ್ತ) ಪುತ್ತೂರು, ಬೆಸಂಟ್ ಮಹಿಳಾ ಕಾಲೇಜು, ಕೊಡಿಯಾಲ್ ಬೈಲ್, ಮಂಗಳೂರು ಹಾಗೂ ಕೆನರಾ ಕಾಲೇಜು ಮಂಗಳೂರು ಕ್ರಮವಾಗಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಂಡವು.