ಮಂಗಳೂರು, ಮಾ.14: ಈಗಾಗಲೇ ನಮ್ಮಲ್ಲಿರುವ ವಿಷಯ ಜ್ಞಾನದ ಜೊತೆಗೆ ಪ್ರಸಕ್ತ ಅಗತ್ಯವಿರುವ ಕೌಶಲ್ಯಗಳನ್ನು ಗಳಿಸಿಕೊಂಡು, ವಿದ್ಯಾರ್ಥಿಗಳಿಗೆ ಕಲಿಸುವುದರ ಮೂಲಕ ಅವರನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧರನ್ನಾಗಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ಹೆಚ್ಚುವರಿ ನಿರ್ದೇಶಕರಾದ ಡಾ. ಶೋಭಾ ಜಿ. ಹೇಳಿದರು. ಅವರು ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಬೆಂಗಳೂರು, ವಾಧ್ವಾನಿ ಫೌಂಡೇಶನ್ ಬೆಂಗಳೂರು ಇವರ ಸಹಭಾಗಿತ್ವದಲ್ಲಿ ಮಂಗಳೂರಿನ ರಥಬೀದಿಯ ಡಾ. ಪಿ. ದಯಾನಂದ ಪೈ-ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸರ್ಕಾರಿ ಕಾಲೇಜುಗಳ ಪ್ರಾಧ್ಯಾಪಕರುಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉದ್ಯೋಗ ಕೌಶಲ್ಯದಿಂದ ನಮಗೆ ಸ್ವಯಂ ಆತ್ಮಸಂತೃಪ್ತಿಯ ಜೊತೆಗೆ ವೃತ್ತಿಯಲ್ಲಿಯೂ ಉನ್ನತಿ ಸಾಧ್ಯವಾಗುತ್ತದೆ ಎಂದರು. ಮುಖ್ಯ ಅತಿಥಿಗಳಾದ ಮಂಗಳೂರಿನ ಜಂಟಿ ನಿರ್ದೇಶಕರಾದ ಪ್ರೊ. ರಾಮೇಗೌಡ ಎಂ. ಮಾತನಾಡಿ, ನಮ್ಮಲ್ಲಿನ ಋಣಾತ್ಮಕ ಚಿಂತನೆಗಳನ್ನು ಬಿಟ್ಟು ಧನಾತ್ಮಕ ಚಿಂತನೆಗಳನ್ನು ಮಾಡಬೇಕು. ಇದರೊಂದಿಗೆ ವಿದ್ಯಾರ್ಥಿಗಳನ್ನೂ ಧನಾತ್ಮಕವಾಗಿ ಬೆಳೆಸಲು ಪ್ರೇರೇಪಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಎಂ. ಮಾತನಾಡಿ, ಇಂದಿನ ಯುವಜನತೆಗೆ ನಿನ್ನೆಯ ಶಿಕ್ಷಣವನ್ನು ನೀಡಿದರೆ ಅವರ ನಾಳೆಯ ಭವಿಷ್ಯವನ್ನು ಹಾಳು ಮಾಡಿದಂತೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಯಶಸ್ವಿಯಾಗಿ ಬದುಕನ್ನು ಕಟ್ಟಲು ಅಗತ್ಯವಾದ ರೀತಿಯಲ್ಲಿ ಅವರನ್ನು ಸಿದ್ಧಗೊಳಿಸುವುದು ನಮ್ಮ ಕರ್ತವ್ಯ ಎಂದರು. ಬೆಂಗಳೂರಿನ ವಾಧ್ವಾನಿ ಫೌಂಡೇಶನ್ ತರಬೇತುದಾರೆ ಸ್ವಾತಿ ಪುತ್ರನ್, ಮಂಗಳೂರು ಜಂಟಿ ನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿಯಾದ ಡಾ. ರಜನಿ, ಬೆಂಗಳೂರು ಕಾಲೇಜು ಶಿಕ್ಷಣ ಇಲಾಖೆಯ ಶಿವಕುಮಾರ್ ಹಾಗೂ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಮಂಗಳೂರು ಜಂಟಿ ನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿ ದೇವಿಪ್ರಸಾದ್ ಸ್ವಾಗತಿಸಿದರು. ಉದ್ಯೋಗ ಕೋಶದ ಸಂಯೋಜಕಿ ಡಾ. ಮಾಲತಿ ಕೆ. ನಿರೂಪಿಸಿ, ಐಕ್ಯೂಎಸಿ ಸಹ ಸಂಯೋಜಕಿ ಡಾ. ಜ್ಯೋತಿಪ್ರಿಯಾ ವಂದಿಸಿದರು.
ಬಳಿಕ ಬೆಂಗಳೂರಿನ ವಾಧ್ವಾನಿ ಫೌಂಡೇಶನ್ ತರಬೇತುದಾರೆ ಸ್ವಾತಿ ಪುತ್ರನ್ ಅವರು ಪ್ರಾಧ್ಯಾಪಕರುಗಳಿಗೆ ಉದ್ಯೋಗ ಕೌಶಲ್ಯ ತರಬೇತಿ ನೀಡಿದರು. ಎರಡು ಜಿಲ್ಲೆಗಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಪಾಲಿಟೆಕ್ನಿಕ್ ಕಾಲೇಜುಗಳ ಎಪ್ಪತ್ತಕ್ಕೂ ಹೆಚ್ಚು ಅಧ್ಯಾಪಕರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.