ಮಂಗಳೂರು, ಜ. 25: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 42ನೇ ಡೊಂಗರಕೇರಿ ವಾರ್ಡಿನ ಅಳಕೆ ವೆಟ್ ವೆಲ್ ಬಳಿ ಗೈಲ್ ಗ್ಯಾಸ್ ರವರ ಸಿ.ಎಸ್.ಆರ್ ಅನುದಾನದಡಿ 23 ಲಕ್ಷ ವೆಚ್ಚದಲ್ಲಿ ಪೌರ ಕಾರ್ಮಿಕರಿಗಾಗಿ ವಿಶ್ರಾಂತಿ ಕೊಠಡಿ ಮತ್ತು ಶೌಚಾಲಯದ ಕಟ್ಟಡ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಶಾಸಕ ವೇದವ್ಯಾಸ್ ಕಾಮತ್ ಹಾಗೂ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ನೇತೃತ್ವದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಸೇರಿದಂತೆ ಪ್ರತೀ ನಗರಗಳ ನೈರ್ಮಲ್ಯ ಹಾಗೂ ಸುಂದರ ಪರಿಸರಕ್ಕೆ ಪೌರಕಾರ್ಮಿಕರ ಕೊಡುಗೆ ಬಹಳಷ್ಟಿದೆ. ಅಂತಹ ಕಾರ್ಮಿಕರಿಗೆ ನಿರಂತರ ಕಾರ್ಯದೊತ್ತಡದ ನಡುವೆ ಒಂದಷ್ಟು ವಿಶ್ರಾಂತಿಯ ಅಗತ್ಯವಿದೆ. ಇದನ್ನು ಮನಗಂಡು ಪ್ರಸ್ತುತ ಮಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಗೈಲ್ ಗ್ಯಾಸ್ ರವರಿಂದ ಸಿ.ಎಸ್.ಆರ್ ಅನುದಾನದಡಿಯಲ್ಲಿ ಈ ವಿಶೇಷ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇಂತಹದೇ ಇನ್ನೂ ಮೂರ್ನಾಲ್ಕು ಯೋಜನೆಗಳು ಜಾರಿಯಾಗಲಿವೆ. ಅವೆಲ್ಲವೂ ಶೀಘ್ರದಲ್ಲಿ ಪೌರಕಾರ್ಮಿಕರ ಉಪಯೋಗಕ್ಕೆ ಸಿಗುವಂತಾಗಲಿ ಎಂದರು.
ಉಪಮೇಯರ್ ಸುನಿತಾ, ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಜಯಶ್ರೀ ಕುಡ್ವ, ಪೂರ್ಣಿಮಾ, ರಾಜೇಂದ್ರ ಕುಮಾರ್, ರಮೇಶ್ ಹೆಗ್ಡೆ, ಗೈಲ್ ಗ್ಯಾಸ್ ಹಾಗೂ ಪಾಲಿಕೆ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.