ಮಂಗಳೂರು, ಜ.21: ಅಯೋಧ್ಯೆ ಶ್ರೀರಾಮ ಮಂದಿರದಲ್ಲಿ ರಾಮ ಪ್ರಾಣಪ್ರತಿಷ್ಠೆ ಮಹೋತ್ಸವದ ನಡೆಯಲಿದ್ದು ಇಡೀ ದೇಶದ ತುಂಬೆಲ್ಲ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಹಿಂದೂಗಳು ಕುಟುಂಬ ಸಮೇತ ತಮ್ಮ ತಮ್ಮ ಮನೆಗಳಲ್ಲಿ, ದೇವಸ್ಥಾನಗಳಲ್ಲಿ, ಧಾರ್ಮಿಕ ಪೂಜಾ ವಿಧಿವಿಧಾನಗಳ ಮೂಲಕ ಈ ಸಂಭ್ರಮದಲ್ಲಿ ಪಾಲ್ಗೊಳ್ಳುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಕರೆ ನೀಡಿದರು.
ಇದು ಭಾರತದ ಮುಂದಿನ ಅನೇಕಾರು ತಲೆಮಾರುಗಳು, ಹಲವಾರು ಶತಮಾನಗಳ ಕಾಲ ನೆನಪಿಟ್ಟುಕೊಳ್ಳುವಂತಹ ದಿನವಾಗಿದ್ದು, ಕೋಟ್ಯಂತರ ಹಿಂದೂಗಳ ಪ್ರಾರ್ಥನೆ, ಲಕ್ಷಾಂತರ ಕರಸೇವಕರ ತ್ಯಾಗ, ಸಾವಿರಾರು ರಾಮಭಕ್ತರ ಬಲಿದಾನದ ಫಲವಾಗಿ ಸನಾತನ ಧರ್ಮದ ಭಗವಾಧ್ವಜ ಬಾನೆತ್ತರದಲ್ಲಿ ರಾರಾಜಿಸುತ್ತಿದೆ. ಈ ಶುಭ ಸಂದರ್ಭಕ್ಕೆ ಕಾರಣೀಭೂತರಾದ ಪ್ರತಿಯೊಬ್ಬ ರಾಮಭಕ್ತರನ್ನೂ ಇಂದಿನ ಪೂಜೆಯ ಸಂದರ್ಭದಲ್ಲಿ ಸ್ಮರಿಸುವ ಮೂಲಕ ಗೌರವ ಸಲ್ಲಿಸುವಂತೆ ಮನವಿ ಮಾಡಿದರು.
ಈ ಅಪೂರ್ವ ಐತಿಹಾಸಿಕ ಕ್ಷಣಕ್ಕೆ ಪ್ರತಿಯೊಬ್ಬ ದೇಶವಾಸಿಯೂ ಸಾಕ್ಷಿಯಾಗಲು ಕೇಂದ್ರ ಸರ್ಕಾರ ಸಹಿತ ದೇಶದ ಬಹುತೇಕ ರಾಜ್ಯಗಳು ಸಾರ್ವಜನಿಕ ರಜೆಯನ್ನು ಘೋಷಿಸಿದ್ದು ರಾಜ್ಯ ಕಾಂಗ್ರೆಸ್ ಸರಕಾರ ಮಾತ್ರ ತನ್ನ ಎಂದಿನ ಹಿಂದೂ ವಿರೋಧಿ ನೀತಿ ಪ್ರದರ್ಶಿಸಿ ರಜೆ ಘೋಷಿಸದೇ ಹಿಂದೂ ಸಮುದಾಯದ ಧಾರ್ಮಿಕ ಭಾವನೆಗಳನ್ನು ಕಡೆಗಣಿಸಿದೆ. ಆದರೂ ಸಹ ಹಲವು ಶತಮಾನಗಳ ಕನಸು ಸಾಕಾರಗೊಳ್ಳುವ ಈ ಐತಿಹಾಸಿಕ ದಿನದಂದು ಸಮಸ್ತ ರಾಮಭಕ್ತರು ಕುಟುಂಬ ಸಮೇತ ಪಾಲ್ಗೊಂಡು ಸಂಭ್ರಮಿಸುವಂತೆ ಶಾಸಕರು ಮನವಿ ಮಾಡಿದರು.