ಮಂಗಳೂರು, ಡಿ.13: ಡಾ.ಪಿ. ದಯಾನಂದ ಪೈ ಮತ್ತು ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ರಥಬೀದಿ ಮಂಗಳೂರು ಇಲ್ಲಿ ಚುನಾವಣಾ ಆಯೋಗ, ಕಾಲೇಜು ಶಿಕ್ಷಣ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಕಾಲೇಜಿನ ರಾಜ್ಯಶಾಸ್ತ್ರ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರಬಂಧ ಸ್ಪರ್ಧೆ, ಭಿತ್ತಿ ಚಿತ್ರ ರಚನಾ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ೧೭೦ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಕೆ ಇವರು, ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಪ್ರತಿಯೊಬ್ಬ ವಿದ್ಯಾರ್ಥಿಯು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಸೂಚಿಸಿದರು.
ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಹಿಂದುಳಿದ ವರ್ಗ ಇಲಾಖೆಯ ಜಿಲ್ಲಾಧಿಕಾರಿ ಹಾಗೂ ಸ್ಪೀಪ್ ಜಿಲ್ಲಾ ನೋಡಲ್ ಅಧಿಕಾರಿ ಸಚಿನ್ ಕುಮಾರ್ ಭಾಗವಹಿಸಿ, ವಿದ್ಯಾರ್ಥಿಗಳಲ್ಲಿ ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಯಕರ ಭಂಡಾರಿ ಎಂ ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬನ ಮತವೂ ಮೌಲ್ಯಯುತವಾಗಿರುವುದರಿಂದ ಪ್ರತಿಯೊಬ್ಬರು ಮತದಾನದಲ್ಲಿ ಪಾಲ್ಗೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಕಾಲೇಜಿನ ಹಿರಿಯ ಉಪನ್ಯಾಸಕರೂ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿರುವ ಡಾ. ನಾಗಪ್ಪ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಕಛೇರಿಯ ವಿಶೇಷಾಧಿಕಾರಿ ದೇವಿಪ್ರಸಾದ್ ಸ್ವಾಗತಿಸಿ, ಉಪನ್ಯಾಸಕಿ ಲೀಲಾವತಿ ವಂದಿಸಿದರು. ಕಾಲೇಜಿನ ಮತದಾರರ ಸಾಕ್ಷರತಾ ಸಮಿತಿಯ ಸಂಚಾಲಕಿ ನಸೀಮ ಬೇಗಂ ನಿರೂಪಿಸಿದರು. ಎಂ.ಕಾಂ ವಿದ್ಯಾರ್ಥಿನಿ ಸುಧೀಕ್ಷಾ ಪ್ರಾರ್ಥನೆ ನೆರವೇರಿಸಿದರು.