ವಿದ್ಯಾಗಿರಿ (ಮೂಡುಬಿದಿರೆ), ಡಿ.13: ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ಸಂದೇಶವನ್ನು ವಿರಾಸತ್ ಹೊಂದಿದೆ. ಸತ್ಯವನ್ನೇ ಬರೆಯುವ ಧ್ಯೇಯವನ್ನು ಮಾಧ್ಯಮ ಹೊಂದಿದೆ. ಜೊತೆಯಾಗಿ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು. ಡಿ.14ರಿಂದ 17ರ ವರೆಗೆ ನಡೆಯುವ ‘ಆಳ್ವಾಸ್ ವಿರಾಸತ್ -23’ರ ಮಾಧ್ಯಮ ಕೇಂದ್ರವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು. ಸಣ್ಣ ಮಟ್ಟದಿಂದ ಆರಂಭಗೊಂಡ ವಿರಾಸತ್ ಇಂದು ಜಾಗತಿಕ ಚಿಂತನೆ ಮೂಲಕ ಲಕ್ಷಾಂತರ ಜನರ ಪಾಲ್ಗೊಳ್ಳುವಿಕೆಯ ಕೇಂದ್ರವಾಗಿದೆ. ಇದಕ್ಕೆ ಮಾಧ್ಯಮವೂ ಉತ್ತಮ ಸ್ಪಂದನೆ ನೀಡುತ್ತಿದೆ ಎಂದರು. ವನ್ಯಜೀವ ಛಾಯಾಗ್ರಾಹಕರಾದ ನಿವೃತ್ತ ಐಎಫ್‌ಎಸ್ ಅಧಿಕಾರಿ ಎಂ.ಎನ್. ಜಯಕುಮಾರ್ ಮಾತನಾಡಿ, ಮಾಧ್ಯಮಗಳ ಮೂಲಕ ಜನರಿಗೆ ಒಳ್ಳೆಯ ಸಂದೇಶ ತಲುಪಲಿ ಎಂದರು. ಪ್ರತಿಭೆಗಳಿಗೆ ಸಾಂಸ್ಕೃತಿಕ ವೇದಿಕೆಗಳು ಅವಶ್ಯ. ಎಲ್ಲಾ ಪ್ರತಿಭೆಗಳಿಗೂ ಇಲ್ಲಿ ಅವಕಾಶವನ್ನು ಕೊಡಲಾಗುತ್ತದೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ದೇಶ ಮಾತ್ರವಲ್ಲದೆ ಹೊರ ದೇಶದವರೆಗೂ ತಲುಪಿಸುವ ಕಾರ್ಯ ನಡೆಯುತ್ತಿದೆ. ಪತ್ರಕರ್ತರು ಕೇವಲ ವರದಿ ಮಾತ್ರವಲ್ಲದೆ, ಈ ವಿರಾಸತ್ ಉತ್ಸವವನ್ನ ಆಸ್ವಾದಿಸಬೇಕು ಎಂದರು. ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಭಾಸ್ಕರ ರೈ, ಖಜಾಂಚಿ ಪುಷ್ಪರಾಜ್, ಹಾಗೂ ಜಿಲ್ಲಾ ಕಾರ‍್ಯಕಾರಿ ಸಮಿತಿ ಸದಸ್ಯರು, ಮೂಡುಬಿದಿರೆ ತಾಲ್ಲೂಕು ಘಟಕದ ಅಧ್ಯಕ್ಷ ಯಶೋಧರ, ಕಾರ‍್ಯದರ್ಶಿ ಪ್ರೇಮಾಶ್ರೀ ಕಲ್ಲಬೆಟ್ಟು, ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಇದ್ದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ನಿರೂಪಿಸಿದರು.