ವಿದ್ಯಾಗಿರಿ, ಡಿ.1: ನಮ್ಮನ್ನು ನಾವು ಮೊದಲು ಗಮನಿಸಬೇಕು. ಜೀವನವನ್ನು ಸಕಾರಾತ್ಮಕವಾಗಿ ಅನುಭವಿಸಬೇಕು ಎಂದು ಉಡುಪಿ ಡಾ.ಎ.ವಿ. ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕ ಹಾಗೂ ಖ್ಯಾತ ಮನೋವೈದ್ಯ ಡಾ.ಪಿ.ವಿ. ಭಂಡಾರಿ ಹೇಳಿದರು. ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ನಡೆದ ‘ಸ್ಪಟಿಕಾ ಫೋರಂ-2023-24’ರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಮಾನಸಿಕ ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು ಎಂದ ಅವರು, ಸಮಾಜಕಾರ್ಯ ಪದವೀಧರರಿಗೆ ಸಮುದಾಯದ ಮಾನಸಿಕ ಆರೋಗ್ಯದ ಕುರಿತು ಕೆಲಸ ಮಾಡಲು ಹೆಚ್ಚಿನ ಅವಕಾಶಗಳಿವೆ. ಮಾನಸಿಕ ಆರೋಗ್ಯದ ಸಮಸ್ಯೆಗೆ ಒತ್ತಡ ಪ್ರಮುಖ ಕಾರಣ. ಇದನ್ನು ನಿವಾರಿಸಲು ನಾಲ್ಕು ಘಟ್ಟಗಳಿವೆ. ಮೊದಲಿಗೆ ನಿಮಗಿರುವ ಒತ್ತಡವನ್ನು ಅರಿತುಕೊಳ್ಳಿ. ನಿಮಗೆ ಒತ್ತಡ ಇದೆ ಎಂದು ಒಪ್ಪಿಕೊಳ್ಳಿ. ಆ ಒತ್ತಡ ಯಾಕೆ, ಹೇಗಿದೆ ಎಂಬುದನ್ನು ವಿಶ್ಲೇಷಿಸಿಕೊಳ್ಳಿ. ಬಳಿಕ ಅದನ್ನು ನಿವಾರಿಸಲು ನಿಮ್ಮ ಕಾರ್ಯ ಯೋಜನೆಯನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು. ಇಂದು ಸಮಾಜದಲ್ಲಿ ಮಾನಸಿಕ ಆರೋಗ್ಯದ ಕುರಿತು ಜಾಗೃತಿ ಹಾಗೂ ತಿಳುವಳಿಕೆ ಅತೀ ಕಡಿಮೆ. ಸಾಮಾನ್ಯವಾಗಿ ಜನರು ತಮ್ಮ ಮಾನಸಿಕ ಸಮಸ್ಯೆಗಳಿಗೆ ಮಾಟ, ಮಂತ್ರ, ಜಾತಕ, ನಾಗದೋಷ ಕಾರಣವೆಂದು ತಿಳಿದು, ಸಮಸ್ಯೆಯ ಗಂಭೀರತೆಯನ್ನು ಅರಿಯಲು ವಿಫಲರಾಗುತ್ತಾರೆ. ಮಾನಸಿಕ ಆರೋಗ್ಯದ ಕುರಿತು ಚಿಕಿತ್ಸೆ ಜನರ ಮನೆಬಾಗಿಲಲ್ಲಿ ಸಿಗುವಂತಾದರೆ ಸಮಸ್ಯೆಯ ಪ್ರಮಾಣವನ್ನು ಕಡಿಮೆ ಮಾಡಬಹುದು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಹೆಚ್ಚಿನ ಜನತೆ ಸಮಕಾಲೀನ ಪ್ರವೃತ್ತಿ (ಟ್ರೆಂಡ್)ಗಳ ವ್ಯಾಮೋಹಕ್ಕೆ ಬಲಿಯಾಗುತ್ತಾರೆ. ಆದರೆ, ‘ಟ್ರೆಂಡ್’ ಬರಬಹುದು, ಹೋಗಬಹುದು. ನೀವು ಮುಂದುವರಿಯಬೇಕು. ಅದಕ್ಕಾಗಿ ಸಕಾರಾತ್ಮಕ ಚಿಂತನೆ, ಸಕ್ರಿಯಾತ್ಮಕ ಬದುಕು ಮುಖ್ಯ ಎಂದರು. ನಿಮ್ಮನ್ನು ಎಲ್ಲ ಧನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಶೈಕ್ಷಣಿಕ ಬದುಕು ಅತ್ಯುತ್ತಮ ಅವಕಾಶ ಎಂದರು. ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಡಾ.ಕುರಿಯನ್, ನಮ್ಮ ದೈಹಿಕ ಸೌಂದರ‍್ಯದ ಕುರಿತು ನಮಗೆ ಕೀಳರಿಮೆ ಸಲ್ಲದು. ನಮ್ಮ ಹೆಚ್ಚಿನ ಮಾನಸಿಕ ಸಮಸ್ಯೆಗಳು ಈ ಕಾರಣದಿಂದ ಹುಟ್ಟಿಕೊಳ್ಳುತ್ತವೆ. ಮಾನಸಿಕವಾಗಿ ತೊಂದರೆಯಲ್ಲಿರುವವರ ಮಾತುಗಳಿಗೆ
ಕಿವಿಯಾಗಿ. ನಮ್ಮ ಸಣ್ಣ ನಿರ್ಲಕ್ಷ್ಯ ಜೀವವನ್ನೆ ಬಲಿ ತೆಗೆದುಕೊಂಡಿತು. ನಾವೆಲ್ಲರೂ ಈ ಸಮಸ್ಯೆಯನ್ನು ಹೋಗಲಾಡಿಸಲು ನಮ್ಮ ಸಾಮಾರ್ಥ್ಯಕ್ಕನುಗುಣಾವಾದಷ್ಟು ಸಹಾಯ ಮಾಡೋಣ ಎಂದರು.
ಸ್ಫಟಿಕ ಪೋರಂನ ಸಂಯೋಜಕಿ ಡಾ ಸಪ್ನಾ, ಫೋರಂನ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ವಿಭಾಗದ ಮುಖ್ಯಸ್ಥೆ ಡಾ.ಮಧುಮಾಲಾ ಕೆ ಇದ್ದರು. ಸ್ಫಟಿಕ ಫೋರಂನ ಉಪಾಧ್ಯಕ್ಷ ಆ್ಯನ್ಸ್ನ್ ಸ್ವಾಗತಿಸಿ, ವಿದ್ಯಾರ್ಥಿನಿ ಲೂಯಿಸ್
ನಿರೂಪಿಸಿದರು. ಸುಜನ್ ಹಾಗೂ ತಂಡ ಜಾಗೃತಿ ಗೀತೆ ಹಾಡಿದರು.