ಮಂಗಳೂರು: ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಇಡ್ಯಾ ಪೂರ್ವ 6ನೇ ವಾರ್ಡಿನ ಅನುಸೂಯಾ ಅವರಿಗೆ ಮಂಗಳೂರು ರಥಬೀದಿಯ ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಿಸಲಾದ ಮನೆಯನ್ನು ಮಂಗಳೂರು ನಗರ ದಕ್ಷಿಣ ಶಾಸಕರೂ, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕಾಧ್ಯಕ್ಷರೂ ಆದ ವೇದವ್ಯಾಸ ಕಾಮತ್ ಅವರು ಶುಕ್ರವಾರ ಕೀಲಿ ಕೈ ನೀಡುವ ಮೂಲಕ ಸಾಂಕೇತಿಕವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು, ಸೇವಾಂಜಲಿ ಚಾರಿಟೇಬಲ್ ಟ್ರಸ್ಟ್ ಎರಡು ದಶಕಗಳಿಂದ ಹಲವಾರು ಸೇವಾಕಾರ್ಯಗಳನ್ನು ಮಾಡುತ್ತಿದೆ. ಭಾರತೀಯ ಜನತಾ ಪಾರ್ಟಿಯ ಹಿರಿಯ ಕಾರ್ಯಕರ್ತೆ ಅನುಸೂಯ ಅವರ ಮನೆ ವಾಸಯೋಗ್ಯ ಇಲ್ಲದೆ ಇರುವುದು ಗಮನಕ್ಕೆ ಬಂದಾಗ ಅದನ್ನು ದಾನಿಗಳ ಸಹಕಾರದಿಂದ ಸುಸಜ್ಜಿತವಾಗಿ ನಿರ್ಮಿಸಿಕೊಡುವ ಸಂಕಲ್ಪ ಮಾಡಲಾಯಿತು.
ಅನುಸೂಯ ಹಾಗೂ ಅವರ ಮಗಳು ಬಹಳ ಸಂಕಷ್ಟಮಯ ಪರಿಸ್ಥಿತಿಯಲ್ಲಿ ವಾಸಿಸುತ್ತಿರುವುದನ್ನು ಅರಿತ ನಮ್ಮ ಟ್ರಸ್ಟ್ ಸಹೃದಯಿಗಳ ನೆರವಿನಿಂದ ಮನೆ ನಿರ್ಮಿಸಿಕೊಟ್ಟಿದೆ ಎಂದು ಹೇಳಿದರು. ನಮ್ಮ ಆತ್ಮೀಯರಾಗಿರುವ ಮುಂಬೈ ನಿವಾಸಿ ದೀಪಕ್ ಶೆಣೈ ಸಹಿತ ಅನೇಕ ಹಿತೈಷಿಗಳು ಮುಂದೆ ಬಂದು ವಿವಿಧ ರೀತಿಯ ಸಹಾಯಹಸ್ತವನ್ನು ಚಾಚಿದ್ದಾರೆ. ಅದರೊಂದಿಗೆ ಸ್ಥಳೀಯ ಕಾರ್ಪೋರೇಟರ್ ಸರಿತಾ ಶಶಿಧರ್ ಕೂಡ ಅಗತ್ಯ ನೆರವು ನೀಡಿದ್ದಾರೆ. ಈ ಮನೆಯಲ್ಲಿ ಅನುಸೂಯ ಮತ್ತು ಅವರ ಪುತ್ರಿ ಮುಂದಿನ ದಿನಗಳನ್ನು ಸುಖಕರವಾಗಿ ಕಳೆಯಲಿ ಎನ್ನುವುದು ನಮ್ಮ ಉದ್ದೇಶ ಎಂದು ಶಾಸಕರು ಹೇಳಿದರು.
ಕಾರ್ಪೋರೇಟರ್ ಸರಿತಾ ಶಶಿಧರ್, ಟ್ರಸ್ಟ್ ಪ್ರಮುಖರಾದ ಮಂಗಲ್ಪಾಡಿ ನರೇಶ್ ಶೆಣೈ, ಹನುಮಂತ ಕಾಮತ್, ನರೇಶ್ ಪ್ರಭು, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಟ್ರಸ್ಟಿನ ಹಿತೈಷಿಗಳಾದ ಸಿದ್ಧಾರ್ಥ ಪ್ರಭು, ಸಂತೋಷ್ ಶೆಣೈ, ಹೃಷಿಕೇಶ್, ಅಂಜನಾ ಕಾಮತ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.