ಮೂಡುಬಿದಿರೆ, ನ.11: ಆಳ್ವಾಸ್ ಕಾಲೇಜಿನ ಪದವಿ ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗ ಮೂರನೇ ವರ್ಷದ ‘ದಿ ಎಂಪೋರಿ-ಯಮ್ ೩’ ಫುಡ್ ಫೆಸ್ಟ್ ಕಾಲೇಜಿನ ಆವರಣದಲ್ಲಿ ಶನಿವಾರ ನಡೆಯಿತು. ಕಾರ‍್ಯಕ್ರಮದ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದ ಉಡುಪಿಯ ಉಜ್ವಲ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಅಜಯ್ ಪಿ ಶೆಟ್ಟಿ, ಆಹಾರ ಉದ್ಯಮ ಇಂದು ಬಹುಬೇಡಿಕೆಯ ಕ್ಷೇತ್ರವಾಗಿ ಮಾರ್ಪಟ್ಟಿದೆ. ಪ್ರತಿ ರಾಜ್ಯವು ತನ್ನ ವೈಶಿಷ್ಟ್ಯಪೂರ್ಣ ಆಹಾರ ಪದ್ಧತಿಯಿಂದ ಜನರನ್ನು ಸೆಳೆಯುತ್ತಿದೆ. ನಮ್ಮ ಕರಾವಳಿಯಲ್ಲೂ ವಿವಿಧ ಬಗೆಯ ಆಹಾರ ಪದ್ಧತಿಯನ್ನು ಕಾಣಬಹುದು. ಆಹಾರ ಉದ್ಯಮದಲ್ಲಿ ತೊಡಗಿರುವ ಹೋಟೇಲ್‌ಗಳು ಆ ನೆಲದ ಸಂಸ್ಕೃತಿಯನ್ನು ಬಿಂಬಿಸುವ ವಾತಾವರಣವನ್ನು ಹೋಟೇಲ್‌ಗಳಲ್ಲಿ ನಿರ್ಮಿಸಲು
ಒತ್ತು ನೀಡಬೇಕು. ಜನರು ಆಕರ್ಷಿತರಾಗುವಂತೆ ಉದ್ಯಮವನ್ನು ಬೆಳೆಸಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಈ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಪಾಡಿಕೊಂಡು, ಉತ್ತಮ ರೀತಿಯ ಸೇವೆಯನ್ನು ನೀಡಿದರೆ ಅತ್ಯಂತ ಲಾಭಾದಾಯಕ ವ್ಯಾವಹಾರವಾಗಿದೆ ಎಂದರು. ಈ ಆಹಾರ ಮೇಳದಲ್ಲಿ ಬಂದ ಲಾಭಂಶದಲ್ಲಿ ಒಂದು ಭಾಗವನ್ನು ಸಾಮಾಜಿಕ ಕಾರಣಕ್ಕೆ ಬಳಸಲಾಗುವುದು ಎಂದು ಘೋಷಿಸಿದರು. ಮಣಿಪಾಲ್ ಇನ್ ಹೋಟೇಲ್‌ನ ಕಾರ‍್ಯನಿರ್ವಾಹಕ ಬಾಣಸಿಗ ಗೌರಿಶಂಕರ್ ಮಾತಾನಾಡಿ, ಹೋಟೇಲ್‌ಗೆ ಆಗಮಿಸುವ ಅತಿಥಿಗಳನ್ನು ಗೌರವದಿಂದ ನೋಡಿಕೊಳ್ಳುವುದು ಮುಖ್ಯ ಎಂದರು. ಅರ್ಷಕ್ ಹಾಗೂ ಅಂಜಲಿ ಕಾರ‍್ಯಕ್ರಮ ನಿರ್ವಹಿಸಿ, ಕಾರ‍್ಯಕ್ರಮದ ವಿದ್ಯಾರ್ಥಿ ಸಂಯೋಜಕ ಮೋರಿಸ್ ಸ್ವಾಗತಿಸಿ, ನೇಹಾ ವಂದಿಸಿದರು. ಆಳ್ವಾಸ್ ಕಾಲೇಜಿನ ಪ್ರಾಚಾರ‍್ಯ ಡಾ ಕುರಿಯನ್, ಆಡಳಿತಾಧಿಕಾರಿ ಪ್ರೊ. ಬಾಲಕೃಷ್ಣ ಶೆಟ್ಟಿ, ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ಮುಖ್ಯಸ್ಥ ಟೆರೆನ್ಸ್ ರೊಡ್ರೀಗಸ್, ಉಪನ್ಯಾಸಕರಾದ, ಶ್ರವಣ್, ಕ್ಲೈಡ್, ರತ್ನಾಕರ ಉಪಸ್ಥಿತರಿದ್ದರು.
ಹಾಸ್ಪಿಟ್ಯಾಲಿಟಿ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ವಿವಿಧ ಕೌಂಟರ್‌ಗಳಲ್ಲಿ ವೈವಿಧ್ಯಮಯ ಅಂತರಾಷ್ಟ್ರೀಯ ಖಾದ್ಯಗಳನ್ನು ತಯಾರಿಸಿ ಆಹಾರ ಪ್ರಿಯರ ರುಚಿ ತಣಿಸಿದರು. ಲೈವ್ ಮೊಕ್‌ಟೈಲ್ ಕೌಂಟರ್, ಲೈವ್ ಫುಡ್ ಕೌಂಟರ್, ಲೈವ್ ಫ್ಲೇಮ್ ಕೌಂಟರ್, ಲೈವ್ ಗೇಮ್ಸ್ನ ಮುಂತಾದ ೧೦ ಕೌಂಟರ್‌ಗಳ ಮೂಲಕ ಆಗಮಿಸಿದ ವಿದ್ಯಾರ್ಥಿಗಳಿಗೆ ಬಗೆಬಗೆಯ ಚಾಟ್ಸ್, ಪಾಸ್ತಾ, ಬರ್ಗರ್, ಇಟೇಲಿಯನ್, ಅಮೇರಿಕನ್, ಚೈನೀಸ್ ತಿಂಡಿ ತಿನಿಸುಗಳನ್ನು ಕಡಿಮೆ ದರದಲ್ಲಿ ನೀಡಲಾಗಿತ್ತು. ಮರ್ವಿನ್ ಫೈರ್ ಪ್ಲೇರಿಂಗ್ ಎಲ್ಲರ ಗಮನ ಸೆಳೆಯಿತು.