ಮಂಗಳೂರು, ನ.1: ಮಂಗಳೂರು ರಥಬೀದಿಯ ಡಾ. ಪಿ. ದಯಾನಂದ ಪೈ- ಪಿ ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೬೮ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ನಾಡಗೀತೆಯಿಂದ ಆರಂಭವಾದ ಕಾರ್ಯಕ್ರಮದ ಮೊದಲಿಗೆ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಆಳ್ವಾಸ್ ಕಾಲೇಜಿನ ಕನ್ನಡ ಉಪನ್ಯಾಸಕರಾದ ಹರೀಶ್ ಟಿ ಜಿ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಪ್ರಸಕ್ತ ವರ್ತಮಾನದಲ್ಲಿ ಕನ್ನಡವು ಎದುರಿಸುತ್ತಿರುವ ತಲ್ಲಣಗಳ ಕುರಿತು ಮಾತನಾಡಿದ ಅವರು, ಕನ್ನಡವನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಕನ್ನಡಿಗರಾದ ನಮ್ಮ ಮೇಲಿದೆ ಎಂದು ತಮ್ಮ ಹಾಸ್ಯಲೇಪಿತ ಉದಾಹರಣೆಗಳಿಂದ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಯಕರ ಭಂಡಾರಿ ಅವರು ಕನ್ನಡನಾಡಿನ ಹಾಗೂ ಕನ್ನಡದ ಮೇಲಿನ ಒಲವು ಹೃದಯದಿಂದ ಬರಬೇಕು ಎಂದರು.
ಕಾಲೇಜಿನ ವಿದ್ಯಾರ್ಥಿ- ವಿದ್ಯಾರ್ಥಿನಿಯರು ‘ಕರ್ನಾಟಕ ಸಂಭ್ರಮ -50’ ಅಭಿಯಾನದ ಅಂಗವಾಗಿ ಆಯ್ಕೆ ಮಾಡಿರುವ ನಾಡಿನ ಹೆಸರಾಂತ ಕವಿಗಳ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’, ‘ಎಲ್ಲಾದರು ಇರು ಎಂತಾದರು ಇರು’, ‘ಒಂದೇ ಒಂದೇ ಒಂದೇ ಕರ್ನಾಟಕ ಒಂದೇ’, ‘ಹೊತ್ತಿತೋ ಹೊತ್ತಿತು ಕನ್ನಡದ ದೀಪ’ ಹಾಗೂ ‘ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ’ ಗೀತೆಗಳನ್ನು ಹಾಡಿ ಕನ್ನಡಾಂಬೆಗೆ ನುಡಿನಮನವನ್ನು ಸಲ್ಲಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಜ್ಯೋತಿಪ್ರಿಯಾ ಸ್ವಾಗತಿಸಿ, ಲಲಿತಕಲಾ ಸಂಘದ ಸಂಯೋಜಕರಾದ ಡಾ. ಕೃಷ್ಣಪ್ರಭ ವಂದಿಸಿದರು. ದ್ವಿತೀಯ ಬಿಎಸ್ಸಿ ವಿದ್ಯಾರ್ಥಿ ಗೀತಾ ಕಾರ್ಯಕ್ರಮ ನಿರೂಪಿಸಿದರು. ರಾಜ್ಯೋತ್ಸವದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.