ಉಡುಪಿ, ಅ. 30: ಬಂಟ್ವಾಳ ತಾಲೂಕಿನ ಕರಿಯಂಗಳ ಗ್ರಾಮದ ಕಲ್ಕುಟದ ದಾಮೋದರ ಸಪಲಿಗ ಇವರ ಗದ್ದೆಯಲ್ಲಿರುವ ಶಾಸನವನ್ನು ಶಿರ್ವ ಎಂ.ಎಸ್.ಆರ್.ಎಸ್ ಕಾಲೇಜಿನ ಇತಿಹಾಸ ಮತ್ತು ಪುರಾತತ್ವ ಉಪನ್ಯಾಸಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಮತ್ತು ತೃತೀಯ ಬಿ.ಎ ವಿದ್ಯಾರ್ಥಿಯಾದ ವಿಶಾಲ್ ರೈ. ಕೆ ಅವರು ಅಧ್ಯಯನಕ್ಕೆ ಒಳಪಡಿಸಿರುತ್ತಾರೆ.
ಕಣ (ಗ್ರಾನೈಟ್) ಶಿಲೆಯಲ್ಲಿ ಕೊರೆಯಲ್ಪಟ್ಟ ಈ ಶಾಸನವು ಸುಮಾರು 3 ಅಡಿ ಎತ್ತರ, 2 ಅಡಿ ಅಗಲವನ್ನು ಹೊಂದಿದೆ. 13 ನೆಯ ಶತಮಾನದ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಈ ಶಾಸನವು ಒಟ್ಟು 15 ಸಾಲುಗಳನ್ನು ಒಳಗೊಂಡಿದ್ದು, ಮುಂಭಾಗದಲ್ಲಿ 12 ಸಾಲು ಮತ್ತು ಶಾಸನದ ಎಡ ಬದಿಯಲ್ಲಿ 3 ಸಾಲುಗಳನ್ನು ನೋಡಬಹುದು. ಸ್ವಸ್ತಿ ಶ್ರೀಮತು ಎಂದು ಆರಂಭಗೊಳ್ಳುವ ಈ ಶಾಸನವು ಕ್ರೋಧಿ ಸಂವತ್ಸರದ ಸಿಂಹಮಾಸ ಮೊದಲಾಗಿ 5ನೆಯ ಆ ಎಂದಿದ್ದು ಈ ಕಾಲಮಾನವು ಆಳುಪ ದೊರೆ 2ನೆಯ ಬಂಕಿದೇವನ (ಸಾ.ಶ.ವ. 1258-1315) ಆಳ್ವಿಕೆಯ ಕಾಲಕ್ಕೆ ಸರಿ ಹೊಂದುತ್ತದೆ.
ಈ ಕಾಲಘಟ್ಟದಲ್ಲಿ ಆಳುಪ ದೊರೆ ಎರಡನೆಯ ಬಂಕಿದೇವನು ಮಂಗಳೂರು ರಾಜ್ಯವನ್ನು ಆಳ್ವಿಕೆ ಮಾಡುತ್ತಿದ್ದಾಗ ಬೊಮಣತಿಕಾರಿಯು ಪೊಳಲ (ಪ್ರಸ್ತುತ ಪೊಳಲಿ) ದೇವಾಲ್ಯದಲ್ಲಿ ಕಲ್ವುಟ (ಪ್ರಸ್ತುತ ಕಲ್ಕುಟ) ದ ಭೂಮಿಯಿಂದ ಪೊಳಲ ದೇವರಿಗೆ ಬಿಟ್ಟ ಗೇಣಿಯ ವಿವರವನ್ನು ಶಾಸನವು ಉಲ್ಲೇಖಿಸುತ್ತದೆ. ಶಾಸನವು ಕೊನೆಯಲ್ಲಿ ಶಾಪಾಶಯ ವಾಕ್ಯದೊಂದಿಗೆ ಕೊನೆಗೊಳ್ಳುತ್ತದೆ. ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಕದ್ರಿ ಶ್ರೀ ಮಂಜುನಾಥ ದೇವಾಲಯದ ಮುಖ್ಯ ಗುಮಾಸ್ತ ಅರುಣ್ ಕುಮಾರ್, ವಿಜಿತಾ ಅಮೀನ್ ಮತ್ತು ಸ್ಥಳೀಯರಾದ ರೋಹಿತಾಕ್ಷ, ಸೂರಜ್ ಅವರು ಸಹಕಾರ ನೀಡಿರುತ್ತಾರೆ.